Site icon newsroomkannada.com

panmboor: ಸಿಮೆಂಟ್ ಮಿಕ್ಸರ್ ಲಾರಿ ಸ್ಕೂಟರಿಗೆ ಡಿಕ್ಕಿಯಾಗಿ ಪೂರ್ಣಿಮಾ ಸಾವು

ಮಂಗಳೂರು: ಚಾಲಕನ ನಿರ್ಲಕ್ಷ್ಯ ಮತ್ತು ದುಡುಕುತನದಿಂದಾಗಿ ಸಿಮೆಂಟ್ ಮಿಕ್ಸರ್ ಲಾರಿ ಸ್ಕೂಟರಿಗೆ ಡಿಕ್ಕಿಯಾಗಿ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಪಣಂಬೂರು ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಉಡುಪಿ ಜಿಲ್ಲೆಯ ಉಪ್ಪಿನಕುದ್ರು ನಿವಾಸಿ ಪೂರ್ಣಿಮಾ(29) ಮೃತರು ಪೂರ್ಣಿಮಾ ಅವರು ಸುರತ್ಕಲ್ ಕುಳಾಯಿಯಲ್ಲಿ ನೆಲೆಸಿದ್ದ ತಂಗಿ ಮಾನಸ ಉಡುಪ ಅವರ ಮನೆಗೆ ಬಂದಿದ್ದರು. ಶುಕ್ರವಾರ ಸಂಜೆ ಮಾನಸ ಅವರು ಉರ್ವಾ ದೇವಸ್ಥಾನಕ್ಕೆಂದು ಸ್ಕೂಟರಿನಲ್ಲಿ ತನ್ನ ಅಕ್ಕ ಪೂರ್ಣಿಮಾ ಅವರನ್ನು ಕುಳ್ಳಿರಿಸಿ ಹೊರಟಿದ್ದರು. ಸ್ಕೂಟರ್ ಕುಳಾಯಿ ಕಡೆಯಿಂದ ಪಣಂಬೂರು ತಲುಪುವಷ್ಟರಲ್ಲಿ ಗೈಲ್ ಗ್ಯಾಸ್ ಪಂಪ್ ಬಳಿಯಲ್ಲಿ ಅದೇ ಹೆದ್ದಾರಿಯಲ್ಲಿ ಸಾಗುತ್ತಿದ್ದ ಸಿಮೆಂಟ್ ಮಿಕ್ಸರ್ ಲಾರಿಯ ಚಾಲಕ ನಿರ್ಲಕ್ಷ್ಯದಿಂದ ಸೈಡಿಗೆ ಬಂದಿದ್ದಾನೆ. ಈ ವೇಳೆ, ಎಡ ಭಾಗದಲ್ಲಿ ಚಲಿಸುತ್ತಿದ್ದ ಸ್ಕೂಟರಿನ ಹ್ಯಾಂಡಲಿಗೆ ಲಾರಿ ತಾಗಿದ್ದು, ಹಿಂಬದಿ ಸವಾರೆಯಾಗಿದ್ದ ಪೂರ್ಣಿಮಾ ಬಲ ಬದಿಗೆ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ, ಲಾರಿಯ ಹಿಂಭಾಗದ ಚಕ್ರವು ಪೂರ್ಣಿಮಾ ಅವರ ಮೇಲಿನಿಂದಲೇ ಚಲಿಸಿದೆ. ಸ್ಕೂಟರ್ ಸವಾರಿ ಮಾಡುತ್ತಿದ್ದ ಮಾನಸ ಅವರು ಎಡ ಭಾಗಕ್ಕೆ ಬಿದ್ದಿದ್ದರಿಂದ ತರಚಿದ ಗಾಯಗೊಂಡು ಅಪಾಯದಿಂದ ಪಾರಾಗಿದ್ದಾರೆ. ಮಹಿಳೆಯ ಹೊಟ್ಟೆಯ ಭಾಗದಿಂದಲೇ ಲಾರಿಯ ಚಕ್ರ ಹರಿದಿದ್ದು ಸ್ಥಳೀಯರು ಕೂಡಲೇ ಆಂಬುಲೆನ್ಸ್ ನಲ್ಲಿ ಎಜೆ ಆಸ್ಪತ್ರೆಗೆ ಒಯ್ದಿದ್ದರು. ಅಷ್ಟರಲ್ಲಿ ಆಕೆ ಮೃತಪಟ್ಟಿದ್ದರು. ಪೊಲೀಸರು ಲಾರಿ ಚಾಲಕ ದೀಪಕ್ ಸುನಾರ್ ಎಂಬಾತನನ್ನು ಬಂಧಿಸಿದ್ದಾರೆ. ಪಣಂಬೂರು ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version