ಬೆಂಗಳೂರು: ಪತ್ನಿಯ ಶೀಲ ಶಂಕಿಸಿ ಹೊಂಚು ಹಾಕಿ ಕುಳಿತಿದ್ದ ಪತಿರಾಯ, ನಡು ರೋಡಲ್ಲಿ ಬಾಯ್ ಫ್ರೆಂಡ್ ಎದುರೇ ಮೀನು ಕತ್ತರಿಸುವ ಮಚ್ಚಲ್ಲಿ ಮನಸ್ಸೋ ಇಚ್ಛೆ ಪತ್ನಿಯನ್ನು ಕತ್ತರಿಸಿ ಹಾಕಿದ್ದಾನೆ. ಭಂಡಧೈರ್ಯ ಮಾಡಿದ್ದ ಸ್ಥಳೀಯರು, ಅಟ್ಯಾಕ್ ಮಾಡ್ತಿದ್ದ ಪತಿಯನ್ನ ಹಿಡಿದು ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬೆಂಗಳೂರಿನ ಮುರುಗೇಶ್ ಪಾಳ್ಯದ ವಿಂಡ್ ಟನೆಲ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ನೈಗರ್ ಮೇಲೆ ಆಕೆಯ ಪತಿ ಶೇಖ್ ಮುಜೀಬ್ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಇವರಿಬ್ಬರೂ ಕಳೆದ ಮೂರು ವರ್ಷಗಳಿಂದ ಲವ್ ಮಾಡಿ ಮದುವೆಯಾಗಿದ್ರು. ಹೊಸಕೋಟೆ ಮೂಲದ ಮುಜೀಬ್, ಕ್ಯಾಬ್ ಡ್ರೈವರ್ ಕೆಲಸ ಮಾಡಿಕೊಂಡು ಆರ್ ಟಿ ನಗರದಲ್ಲಿ ವಾಸವಿದ್ದ. ನೈಗರ್ ಪ್ರೈವೆಟ್ ಕಂಪನಿಯಲ್ಲಿ ಕೆಲಸಕ್ಕೆ ಹೋಗುತ್ತಿದ್ದಳು.
ಇತ್ತೀಚೆಗೆ ಹೆಂಡ್ತಿ ನಡತೆ ಮೇಲೆ ಸಂಶಯ ಹೊಂದಿದ್ದ ಶೇಖ್ ಮುಜೀಬ್, ಹೆಂಡ್ತಿಯಿಂದ ದೂರಾಗಿದ್ದನು. ಇತ್ತ ಪತ್ನಿಯು ಸಲೀಂ ಅನ್ನೋನ ಜೊತೆ ಸುತ್ತಾಡ್ತಿದ್ದಾಳೆ ಅನ್ನೋ ವಿಚಾರ ಮುಜೀಬ್ ಗಮನಕ್ಕೆ ಬಂದಿದೆ. ಹೀಗಾಗಿ ಸೋಮವಾರ ಶಿವಾಜಿನಗರಕ್ಕೆ ಹೋಗಿ ಮೀನು ಕತ್ತರಿಸುವ ಮಚ್ಚು ಖರೀದಿ ಮಾಡಿ ಪತ್ನಿ ಪಿಜಿಗೆ ವಾಪಸ್ಸಾಗುವ ರಸ್ತೆಯಲ್ಲಿ ಹೊಂಚು ಹಾಕಿ ಕುಳಿತಿದ್ದ. ಅಂತೆಯೇ ಸಂಜೆ 7 ಗಂಟೆಗೆ ಬಾಯ್ ಫ್ರೆಂಡ್ ಸಲೀಂ ಜೊತೆ ಬಂದ ಹೆಂಡ್ತಿ ನೋಡಿ ಆಕೆಯ ಕೈ ಬೆರಳುಗಳನ್ನ ಟಾರ್ಗೆಟ್ ಮಾಡಿ ಮಚ್ಚಿಂದ ಹಲ್ಲೆ ಮಾಡಿದ್ದ. ಈ ವೇಳೆ ಪತ್ನಿ ತಲೆ ಮೇಲೆ ಕೈ ಇಟ್ಕೊಂಡಿದ್ದರಿಂದ ಕೈ ಜೊತೆಗೆ ತಲೆಗೂ ಗಂಭೀರ ಗಾಯವಾಗಿದೆ. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು.
ಕೂಡಲೇ ಸ್ಥಳೀಯರು ಮುಜೀಬ್ ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಘಟನೆ ಸಂಬಂಧ ಜೀವನ್ ಭೀಮಾ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 307 ರಡಿ ಪ್ರಕರಣ ದಾಖಲಾಗಿದ್ದು, ಆರೋಪಿಯ ವಿಚಾರಣೆ ನಡೆಸಲಾಗ್ತಿದೆ