ಮಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾನುವಾರ(ಮಾ.10) ರಂದು ಮಂಗಳೂರಿನ ಕುತ್ತಾರು ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿ ದೈವದ ದರ್ಶನವನ್ನು ಪಡೆದುಕೊಂಡಿದ್ದಾರೆ. ಶೂಟಿಂಗ್‌ನಿಂದ ಬ್ರೇಕ್ ಪಡೆದುಕೊಂಡು ಡಿಬಾಸ್ ದರ್ಶನ್ ತನ್ನ ಸ್ನೇಹಿತರಾದ ಯಶಸ್ ಸೂರ್ಯ, ಚಿಕ್ಕಣ್ಣ ಜೊತೆ ಭೇಟಿ ನೀಡಿದ್ದಾರೆ. ಕೊರಗಜ್ಜನ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು.
ನಾನು ಭೇಟಿ ನೀಡಿದಕ್ಕೆ ಯಾವುದೇ ನಿರ್ದಷ್ಟ ಕಾರಣ ಇಲ್ಲ, ನಾನು ಏನು ಪ್ರಾರ್ಥನೆ ಮಾಡಿದೆ ಅಂತಾ ಹೇಳಿದರೆ ನೀವು ಮಾಡಿಕೊಡ್ತೀರಾ” ಎಂದು ಪ್ರಶ್ನಿಸಿದ ಪತ್ರಕರ್ತರಿಗೆ ಮರು ಪ್ರಶ್ನೆ ಹಾಕಿದರು.
ಸುಮಲತಾ ಅವರು ಚುನಾವಣಗೆ ನಿಂತರೆ ಅವರ ಪರವಾಗಿ ಪ್ರಚಾರ ಮಾಡ್ತೀರಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು,”ಹೆತ್ತ ತಾಯಿಯನ್ನು ಬಿಟ್ಟುಕೊಡಕ್ಕಾಗುತ್ತಾ? ಮೊನ್ನೆವರೆಗೂ ಎಲ್ಲಾ ಸುಮಲತಾ ಅಮ್ಮನ ಜೊತೆ ಇದ್ದೆ , ಈಗ ಅವರ ಕೈ ಬಿಟ್ರೆ ಆಗುತ್ತಾ ಸರ್ , ನಿಮ್ಮ ಮನೇಲಿ ನಿಮ್ಮ ತಾಯಿನ ಬಿಟ್ ಬಿಡ್ತೀರಾ, ಸುಮಲತಾ ಅಮ್ಮ ಅಮ್ಮನೇ ಸಾರ್” ಎಂದಿದ್ದಾರೆ.
ಸಂದರ್ಭದಲ್ಲಿ ಎ.ಜೆ. ವೈದ್ಯಕೀಯ ಕಾಲೇಜಿನ ಪ್ರಶಾಂತ್ ಮಾರ್ಲ, ಶ್ರೀ ಪಂಜಂದಾಯ ಬಂಟ ವೈದ್ಯನಾಥ ಆದಿ ಕೊರಗತನಿಯ ಸೇವಾ ಟ್ರಸ್ಟ್ ನ ಉಪಾಧ್ಯಕ್ಷ ಮಾಗಣ್ತಡಿಗುತ್ತು ಮಹಾಬಲ ಹೆಗ್ಡೆ ದೆಬ್ಬೇಲಿ, ಟ್ರಸ್ಟಿಗಳಾದ ಪ್ರೀತಮ್ ಶೆಟ್ಟಿ, ವಿದ್ಯಾಚರಣ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.
ಭಾನುವಾರ ಆಗಿದ್ದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಅಜ್ಜನ ಸಂದರ್ಶನಕ್ಕೆ ಭಕ್ತರು ಆಗಮಿಸಿದ್ದರು. ಡಿಬಾಸ್ ಭೇಟಿಯನ್ನು ಗಮನಿಸಿ ಅವರ ಜೊತೆಗೆ ಸೆಲ್ಫೀ ಹಾಗೂ ಭಾವಚಿತ್ರ ತೆಗೆಯಲು ಮುಗಿಬಿದ್ದರು. ಆದರೆ ಜತೆಗಿದ್ದ ಬಾಡಿಗಾರ್ಡ್ ಗಳು ಅಭಿಮಾನಿಗಳ ಆಸೆಗೆ ತಣ್ಣೀರೆರಚಿದರು.
ಇತ್ತೀಚೆಗೆ ನಟ ದರ್ಶನ್ ಅವರ ಹುಟ್ಟುಹಬ್ಬದಂದು ನಟ ದರ್ಶನ್ ಅವರ ʼಡೆವಿಲ್ʼ ಹಾಗೂ ʼಸಿಂಧೂರ ಲಕ್ಷ್ಮಣʼ ಸೇರಿದಂತೆ ಇತರೆ ಚಿತ್ರಗಳು ಅನೌನ್ಸ್ ಆಗಿದೆ.