Site icon newsroomkannada.com

ಶಿವರಾತ್ರಿಯಂದೇ ಶಿವೈಕ್ಯಳಾದ ಧರ್ಮಸ್ಥಳ ಕ್ಷೇತ್ರದ ಆನೆ ಲತಾ

ಬೆಳ್ತಂಗಡಿ: ಧರ್ಮಸ್ಥಳ ಕ್ಷೇತ್ರದಲ್ಲಿ ಕಳೆದ 50 ವರ್ಷಗಳಿಂದ ಮಂಜುನಾಥನ ಸೇವೆ ಸಲ್ಲಿಸುತ್ತಿದ್ದ ಆನೆ ಲತಾ ಶಿವರಾತ್ರಿಯಂದೇ ಶಿವೈಕ್ಯಳಾಗಿದ್ದಾಳೆ. ಶುಕ್ರವಾರ ಮಧ್ಯಾಹ್ನ ಹೃದಾಯಾಘಾತದಿಂದ ಗಜರಾಣಿ ಲತಾ ಇಹಲೋಕ ತ್ಯಜಿಸಿ ಶಿವನ ಪಾದ ಸೇರಿದ್ದಾಳೆ. 60 ವರ್ಷ ಪ್ರಾಯವಾಗಿರುವ ಲತಾ ಧರ್ಮಸ್ಥಳ ಕ್ಷೇತ್ರದ ಜಾತ್ರೋತ್ಸವ, ಲಕ್ಷಾದೀಪೋತ್ಸವ, ಶಿವರಾತ್ರಿ ಉತ್ಸವ ಹೀಗೆ ಎಲ್ಲಾ ಉತ್ಸವದಲ್ಲೂ ಮುಂಚೂಣಿಯಲ್ಲಿದ್ದಳು.
ಉತ್ಸವಗಳು ನಡೆಯುವಾಗ ಸೊಂಡಿಲು ಎತ್ತಿ ನಮಸ್ಕರಿಸುತ್ತಾ ಸಾಗುವುದನ್ನು ನೋಡುವುದೇ ಒಂದು ಖುಷಿಯಾಗಿತ್ತು. ಭಕ್ತಾದಿಗಳಿಗೂ ಯಾವುದೇ ತೊಂದರೆ ನೀಡದೆ ಏನನ್ನೂ ಅಪೇಕ್ಷಿಸದೇ ಇದ್ದ ಲತಾ ಧರ್ಮಸ್ಥಳ ಧರ್ಮಾಧಿಕಾರಿಗಳಿಗೂ ಅಚ್ಚುಮೆಚ್ಚಿನವಳಾಗಿದ್ದಳು.
ಶಿವಾನಿ ಹಾಗೂ ಲಕ್ಷ್ಮಿ ಕ್ಷೇತ್ರದಲ್ಲಿ ಇದ್ದರೂ ಕೂಡಾ ಲತಾ ನಡೆದುಕೊಂಡಂತೆ ಆಕೆಯನ್ನು ಅನುಸರಿಸುತ್ತಿದ್ದವು. ಲತಾಳಿಗೆ ಜನಿಸಿದವಳು ಲಕ್ಷ್ಮಿಯಾಗಿದ್ದರೆ, ಲಕ್ಷ್ಮಿಯಲ್ಲಿ ಜನಿಸಿದ ಆನೆ ಶಿವಾನಿ. ಶಿವಾನಿ ಜನನವಾದ ಬಳಿಕ ಲಕ್ಷ್ಮೀ ಉತ್ಸವದಲ್ಲಿ ಭಾಗವಹಿಸುತ್ತಿರಲಿಲ್ಲವಾಗಿದ್ರೂ, ಲತಾ ಮಾತ್ರ ನಿರಂತರವಾಗಿ ದೇವರ ಸೇವೆಯಲ್ಲಿ ಭಾಗಿಯಾಗಿದ್ದಳು.

ವಯಸ್ಸಾಗಿರೋ ಲತಾ ಶಿವರಾತ್ರಿಯಂದೇ ಶಿವನ ಪಾದ ಸೇರಿದ್ದು, ಧರ್ಮಸ್ಥಳ ಕ್ಷೇತ್ರದ ಜನರು ಕಂಬನಿ ಮಿಡಿದಿದ್ದಾರೆ. ಶುಕ್ರವಾರ ಸಂಜೆ ಧರ್ಮಸ್ಥಳದಲ್ಲಿ ಲತಾ ಅಂತ್ಯಕ್ರಿಯೆ ನಡೆಯಲಿದೆ.

Exit mobile version