ತುಮಕೂರು: ಒಂದು ಹಸು ಒಂದು ಸಮಯಕ್ಕೆ ಎಷ್ಟು ಕರುಗಳಿಗೆ ಜನ್ಮ ನೀಡಬಹುದು? ಇಂದೆಥಾ ಪ್ರಶ್ನೆ ಎಂದು ಕೊಳ್ಳಬೇಡಿ. ಹಸು ಒಂದು ಬಾರಿಗೆ ಒಂದು ಕರುವಿಗೆ ಜನ್ಮ ನೀಡಬಹುದು. ಇದು ಸರ್ವೇ ಸಾಮಾನ್ಯ, ಇದಕ್ಕೂ ಮೀರಿ ಅವಳಿ ಕರುಗಳಿಗೆ ಕೆಲವು ಹಸುಗಳು ಜನ್ಮ ನೀಡುತ್ತವೆ. ಇದು ಬೆರಳೆಣಿಕೆಯ ಘಟನೆಗಳಾಗಿರುತ್ತವೆ. ಆದರೆ ಇಲ್ಲೊಂದು ಹಸು ಒಂದಲ್ಲ.. ಎರಡಲ್ಲ.. ಹೋಗ್ಲಿ ಮೂರು ಅಲ್ಲ ಬರೋಬ್ಬರಿ ನಾಲ್ಕು ಕರುಗಳಿಗೆ ಜನ್ಮ ನೀಡಿದೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಚೇಳೂರು ಗ್ರಾಮದಲ್ಲಿ ಈ ಅಚ್ಚರಿಯ ಘಟನೆ ನಡೆದಿದೆ. ಚೇಳೂರು ಗ್ರಾಮದ ಮುನಿಯಪ್ಪ ಎನ್ನುವವರಿಗೆ ಸೇರಿದ ರೈತರ ಹಸುವೊಂದು ನಾಲ್ಕು ಕರುಗಳಿಗೆ ಜನ್ಮ ನೀಡಿದೆ. ಕಪ್ಪು ಬಿಳುಪಿನ ನಾಲ್ಕು ಮುದ್ದಾದ ಆರೋಗ್ಯವಂತ ಕರುಗಳಿಗೆ ಮುನಿಯಪ್ಪ ಅವರ ಮನೆಯ ಹಸು ಜನ್ಮ ನೀಡಿದೆ. ನಾಲ್ಕು ಕರುಗಳಲ್ಲಿ ಒಂದು ಹೆಣ್ಣು ಹಾಗೂ ಮೂರು ಗಂಡು ಕರುಗಳಾಗಿದ್ದು, ಸದ್ಯ ತಾಯಿ ಹಸು ಹಾಗೂ ನಾಲ್ಕೂ ಕರುಗಳು ಆರೋಗ್ಯವಾಗಿವೆ. ಒಮ್ಮೆಲೆ ನಾಲ್ಕು ಕರುಗಳ ಜನನದಿಂದ ರೈತ ಮುನಿಯಪ್ಪ ಅವರ ಮನೆಯಲ್ಲಿ ಖುಷಿ ಮನೆ ಮಾಡಿದೆ.