ಮಂಗಳೂರು: ಜ್ಞಾನವಾಪಿ ಮಸೀದಿ ವಿವಾದದ ಮಧ್ಯೆ ಇದೀಗ ಮಂಗಳೂರಿನ ಮಳಲಿ ಮಸೀದಿಯ ವಿವಾದವು ಮುನ್ನಲೆಗೆ ಬಂದಿದೆ. ಈ ಮಸೀದಿಯ ವಿಚಾರಣೆಯನ್ನು ಜಿಲ್ಲಾ ನ್ಯಾಯಾಲಯವೇ ಮಾಡಲಿ ಎಂದು ಹೈಕೋರ್ಟ್ ಆದೇಶ ನೀಡಿದೆ. ಹೀಗಾಗಿ ಇಡೀ ಪ್ರಕರಣದ ಹೊಣೆಯನ್ನು ಇದೀಗ ವಕ್ಫ್ ಬೋರ್ಡ್ ಕೈಗೆತ್ತಿಕೊಂಡಿದ್ದು, ಮಸೀದಿ ವಕ್ಫ್ ಬೋರ್ಡ್ ಆಸ್ತಿಯೆಂದು ಸಾಬೀತುಪಡಿಸಲು ಮುಂದಾಗಿದೆ.
ಕಳೆದ ವರ್ಷ ಮಂಗಳೂರಿನ ಹೊರವಲಯದ ಮಳಲಿ ಜುಮ್ಮಾ ಮಸೀದಿಯ ಅಭಿವೃದ್ಧಿ ಕಾಮಗಾರಿ ಮಾಡುತ್ತಿದ್ದ ವೇಳೆ ಮಸೀದಿಯ ಮೇಲ್ಛಾವಣಿ ಹಿಂದೂ ದೇವಸ್ಥಾನದ ಶೈಲಿಯಲ್ಲಿ ಇದೆ. ಅಲ್ಲಿ ಪಾಣಿಪೀಠ ಸೇರಿದಂತೆ ದೇವಸ್ಥಾನ ಹಲವು ಕುರುಹುಗಳಿದೆ ಎಂದು ವಿಶ್ವ ಹಿಂದೂ ಪರಿಷತ್ ಮಸೀದಿಯ ಕಾಮಗಾರಿಯನ್ನು ನಿಲ್ಲಿಸಲು ಆಕ್ಷೇಪ ಎತ್ತಿತ್ತು. ಬಳಿಕ ತಾಂಬೂಲ ಪ್ರಶ್ನೆ ಇಡಲಾಗಿತ್ತು. ಅದರಲ್ಲೂ ಮಸೀದಿಯೊಳಗೆ ಶಿವ ಸಾನಿಧ್ಯ ಇದೆ ಎಂದು ಗೊತ್ತಾಗಿತ್ತು. ಹೀಗಾಗಿ ವಿಎಚ್‌ಪಿ ಮಸೀದಿ ಕಾಮಗಾರಿಯನ್ನು ನಿಲ್ಲಿಸಬೇಕು ಜೊತೆಗೆ ಮಸೀದಿಯ ಸರ್ವೇ ಕಾರ್ಯ ನಡೆಸಬೇಕೆಂದು ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದಾವೆ ಹೂಡಿತ್ತು.
ಇದನ್ನ ಪ್ರಶ್ನಿಸಿ ಮಳಲಿ ಮಸೀದಿ ಕಮಿಟಿ ಈ ಮಸೀದಿ ವಕ್ಫ್ ಬೋರ್ಡ್‌ಗೆ ಸೇರಿದ ಆಸ್ತಿ ಹೈಕೋರ್ಟ್ ಮೊರೆ ಹೋಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಮತ್ತೆ ಜಿಲ್ಲಾ ನ್ಯಾಯಾಲಯವೇ ವಿಚಾರಣೆ ನಡೆಸಬೇಕೆಂದು ಜ.31ರಂದು ಆದೇಶಿಸಿದೆ.
ಮಳಲಿ ಮಸೀದಿ ವಕ್ಫ್ ಬೋರ್ಡ್ ಅಧೀನದಲ್ಲಿರುವುದರಿಂದ ವಕ್ಫ್ ಟ್ರಿಬ್ಯುನಲ್‌ಗೆ ಪ್ರಕರಣ ಹಸ್ತಾಂತರ ಆಗಬೇಕೆಂದು ಮಳಲಿ ಮಸೀದಿ ಆಡಳಿತ ಕಮಿಟಿ ಹೈಕೋರ್ಟ್ ಗಮನಕ್ಕೆ ತಂದಿದೆ. ಹೀಗಾಗಿ ಈ ಮಸೀದಿ ವಕ್ಫ್ ಬೋರ್ಡ್ ಆಸ್ತಿ ಹೌದೋ ಅಲ್ಲವೇ ಎಂಬುದನ್ನು ಕೆಳ ನ್ಯಾಯಾಲಯವೇ ವಿಚಾರಣೆ ನಡೆಸಬೇಕೆಂದು ಹೈಕೋರ್ಟ್ ಆದೇಶಿಸಿದೆ. ಹೀಗಾಗಿ ಮತ್ತೆ ಜಿಲ್ಲಾ ನ್ಯಾಯಾಲಯದಲ್ಲೇ ಮಸೀದಿ ಆಸ್ತಿಯ ಬಗ್ಗೆ ವಿಚಾರಣೆ ನಡೆಯಲಿದೆ.
ಈ ಮಸೀದಿ ವಕ್ಫ್ ಆಸ್ತಿ ಎನ್ನುವುದಕ್ಕೆ ಸುಮಾರು 700 ವರ್ಷಗಳ ದಾಖಲೆಗಳು ಇದೆ. ಅದನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಮಸೀದಿ ಸಮಿತಿಯವರು ತಯಾರು ನಡೆಸಿದ್ದಾರೆ.