Site icon newsroomkannada.com

ಅಮೆರಿಕದಲ್ಲಿ ದಂಪತಿ ಮಕ್ಕಳ ಸಾವಿಗೆ ಸಿಕ್ತು ರೋಚಕ ಟ್ವಿಸ್ಟ್‌

ಆನಂದ್‌ ಸುಜಿತ್‌ ತನ್ನ ಪತ್ನಿಯನ್ನು ಕೊಂದಿದ್ದೇಕೇ ಗೊತ್ತಾ?
ವಾಷಿಂಗ್ಟನ್‌: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ ಮೂಲದ ನಾಲ್ವರು ನಿಗೂಢವಾಗಿ ಮೃತಪಟ್ಟಿರುವ ಘಟನೆಗೆ ರೋಚಕ ಟ್ವಿಸ್ಟ್‌ ಲಭಿಸಿದೆ. ಆನಂದ್‌ ಸುಜಿತ್‌ ಹೆನ್ರಿ (42), ಆತನ ಪತ್ನಿ ಅಲೈಸ್‌ ಪ್ರಿಯಾಂಕಾ (40) ಮತ್ತು ಅವಳಿ ಮಕ್ಕಳಾದ 4ರ ಹರೆಯದ ನೋಹ್‌ ಮತ್ತು ನ್ಯಾಥನ್‌ ಅವರ ಶವ ಪತ್ತೆಯಾಗಿತ್ತು. ಆರಂಭದಲ್ಲಿ ಇದು ಎಸಿ ಅಥವಾ ಹೀಟರ್‌ನ ವಿಷಕಾರಿ ಅನಿಲ ಸೋರಿಕೆಯಾಗಿ ಈ ನಾಲ್ವರು ಮೃತಪಟ್ಟಿದ್ದಾರೆ ಅಥವಾ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅಂದಾಜಿಸಲಾಗಿತ್ತು. ಆದರೆ ಇದೀಗ ತನಿಖೆಯ ವೇಳೆ ಸತ್ಯಾಂಶ ಹೊರ ಬಿದ್ದಿದೆ. ಆನಂದ್‌ ಸುಜಿತ್‌ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಂದು ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಡಿನ ಗಾಯಗಳಿರುವ ದಂಪತಿಯ ಶವ ಮನೆಯ ಬಾತ್‌ರೂಮ್‌ನಲ್ಲಿ ಪತ್ತೆಯಾಗಿತ್ತು. ಮಕ್ಕಳ ಮೃತದೇಹ ಬೆಡ್‌ರೂಮ್‌ನಲ್ಲಿ ಕಂಡು ಬಂದಿತ್ತು. ʼʼಆನಂದ್‌ ಸುಜಿತ್‌ ಹೆನ್ರಿ ಮತ್ತು ಅಲೈಸ್‌ ಪ್ರಿಯಾಂಕಾ ಇಬ್ಬರೂ ಗುಂಡೇಟಿಗೆ ಬಲಿಯಾಗಿದ್ದಾರೆ. ಇಲ್ಲಿಯವರೆಗಿನ ತನಿಖೆಯ ಆಧಾರದ ಮೇಲೆ, ಆನಂದ್ ಹೆನ್ರಿಯನ್ನು ಶಂಕಿತ ಎಂದು ಗುರುತಿಸಲಾಗಿದೆ” ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಅಲೈಸ್‌ ಪ್ರಿಯಾಂಕಾ ದೇಹದ ಮೇಲೆ ಅನೇಕ ಗುಂಡಿನ ಗಾಯ ಕಂಡುಬಂದರೆ ಆನಂದ್‌ ಸುಜಿತ್‌ ದೇಹದಲ್ಲಿ ಏಕೈಕ ಗುಂಡಿನ ಗಾಯ ಪತ್ತೆಯಾಗಿದೆ. ಆದರೆ ಮಕ್ಕಳ ಸಾವಿಗೆ ಕಾರಣ ಏನು ಎನ್ನುವುದು ಗೊತ್ತಾಗಿಲ್ಲ. ಅವರ ದೇಹದಲ್ಲಿ ಯಾವುದೇ ಗಾಯ ಕಂಡು ಬಂದಿಲ್ಲʼʼ ಎಂದು ಪೊಲೀಸರು ಹೇಳಿದ್ದಾರೆ. ಆನಂದ್‌ ಸುಜಿತ್‌ ಈ ಹಿಂದೆ ಮೆಟಾದಲ್ಲಿ ಉದ್ಯೋಗಿಯಾಗಿದ್ದರು.

ಆನಂದ್‌ ಸುಜಿತ್‌ ಮತ್ತು ಅಲೈಸ್‌ ಪ್ರಿಯಾಂಕಾ ಮೂಲತಃ ಕೇರಳದವರು. ಅವರು ಸುಮಾರು 9 ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿದ್ದಾರೆ. ಆನಂದ್‌ ಸುಜಿತ್‌ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದರೆ, ಅಲೈಸ್‌ ಪ್ರಿಯಾಂಕಾ ಹಿರಿಯ ಅನಾಲಿಸ್ಟ್‌. ಕೋರ್ಟ್‌ ದಾಖಲೆಯ ಪ್ರಕಾರ ಆನಂದ್‌ ಸುಜಿತ್‌ 2016ರಲ್ಲಿಯೇ ಡಿವೋರ್ಸ್‌ ನೋಟಿಸ್‌ ನೀಡಿದ್ದ. ಆದರೆ ಬಳಿಕ ಅದನ್ನು ಮುಂದುವರಿಸಿರಲಿಲ್ಲ. ಆನಂದ್‌ ಸುಜಿತ್‌ ಕೊಲ್ಲಂನ ಫಾತಿಮಾ ಮಾತಾ ನ್ಯಾಷನಲ್‌ ಕಾಲೇಜಿನ ಮಾಜಿ ಪ್ರಾಂಶುಪಾಲ ಜಿ.ಹೆನ್ರಿ ಅವರ ಪುತ್ರ.

ʼʼಆನಂದ್‌ ಸುಜಿತ್‌ ಈ ಹಿಂದೆ ಹಿಂಸಾಚಾರ ನಡೆಸಿದ ಯಾವುದೇ ಇತಿಹಾಸವಿಲ್ಲ. ಈ ಹಿಂದೆ ಮನೆಯ ಹಿತ್ತಿಲಿನಲ್ಲಿ ವನ್ಯ ಜೀವಿಯನ್ನು ಕಂಡಾಗ ಮಾತ್ರ ಮನೆಯವರು ಪೊಲೀಸರನ್ನು ಕರೆದಿದ್ದರು. ಅದು ಬಿಟ್ಟರೆ ಈ ಕುಟುಂಬ ಇದುವರೆಗೆ ಪೊಲೀಸರನ್ನು ಸಂಪರ್ಕಿಸಿಲ್ಲʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪರಿಚಯಸ್ಥರು ಕೆಲವು ದಿನಗಳಿಂದ ಈ ಕುಟುಂಬದ ಸಂಪರ್ಕ ಇಲ್ಲದ ಕಾರಣ ಪೊಲೀಸರಿಗೆ ದೂರು ನೀಡಿದ್ದರು. ಈ ವೇಳೆ ತನಿಖೆ ನಡೆಸಿದಾಗ ಸಾವಿನ ಪ್ರಕರಣ ಬೆಳಕಿಗೆ ಬಂದಿತ್ತು.

Exit mobile version