ಜನವರಿ 22ರಂದು ಭವ್ಯ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದ್ದು, ದೇಶಾದ್ಯಂತ ಸಂಭ್ರಮ ಮನೆ ಮಾಡಿದೆ. 500 ವರ್ಷಗಳ ನಂತರ ಅಯೋಧ್ಯೆಯಲ್ಲಿ ಮತ್ತೆ ರಾಮಮಂದಿರ ನಿರ್ಮಾಣವಾಗಿದ್ದು, ಅದರ ಉದ್ಘಾಟನೆಯನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಕಾತುರರಾಗಿದ್ದಾರೆ.
ಏತನ್ಮಧ್ಯೆ ಈ ಕಾತುರ ವಿದೇಶಿಯರಲ್ಲೂ ಹೆಚ್ಚಾಗಿದ್ದು, ದಕ್ಷಿಣ ಕೊರಿಯಾಕ್ಕೂ, ಉತ್ತರಪ್ರದೇಶದ ಅಯೋಧ್ಯೆಗೂ ವಿಶೇಷವಾದ ಸಂಬಂಧವಿದೆ.
ಪ್ರತಿವರ್ಷ ಸಾವಿರಾರು ದಕ್ಷಿಣ ಕೊರಿಯನ್ನರು ಅಯೋಧ್ಯೆಗೆ ಆಗಮಿಸಿ ರಾಣಿ ಹೂ ಹ್ವಾಂಗ್ ಓಕ್ (ಸುರೀರತ್ನ) ಗೆ ಗೌರವ ಸಲ್ಲಿಸಿ ತೆರಳುತ್ತಾರೆ. ಇದಕ್ಕೆ ಕಾರಣ ಅಯೋಧ್ಯೆ ತಮ್ಮ ಪೂರ್ವಜರ ಮೂಲ ಎಂಬ ನಂಬಿಕೆ ದಕ್ಷಿಣ ಕೊರಿಯಾ ಜನರದ್ದಾಗಿದೆ. ರಾಣಿ ಹೂ ಹ್ವಾಂಗ್ ಓಕ್ ಅಲಿಯಾಸ್ ರಾಜಕುಮಾರಿ ಸುರೀರತ್ನ ಅಯೋಧ್ಯೆಯ ರಾಣಿಯಾಗಿದ್ದಳು.
ಅಯುತಾಯನ ರಾಜಕುಮಾರಿ ಸುರೀರತ್ನ ಅತೀ ಸೌಂದರ್ಯವತಿಯಾಗಿದ್ದಳು. ಅವಳು ರಾಜ ಸೂರ್ಯವರ್ಮನ್ ಮತ್ತು ರಾಣಿ ಮಯೂರ್ಚತನ ಮಗಳು. ಒಂದು ದಿನ ರಾಜಕುಮಾರಿ ಸುರೀರತ್ನಗೆ ಕನಸು ಬಿದ್ದಿದ್ದು, ಅದರಲ್ಲಿ ಆಕೆ ದೂರದ ದೇಶದಿಂದ ಬೆಳಕು ಬಂದಿದ್ದನ್ನು ಕಂಡಿದ್ದಳು. ಕೊನೆಗೆ ರಾಜಕುಮಾರಿ ಸುರೀರತ್ನ ಬೆಳಕಿನ ಮೂಲವನ್ನು ಕಂಡುಹಿಡಿಯುವ ಸಾಹಸಕ್ಕೆ ಮುಂದಾಗಿದ್ದಳು. ಇದಕ್ಕಾಗಿ ಸುರೀರತ್ನ ತನ್ನ ಸಂಗಡಿರ ಜತೆ ಸಮುದ್ರಯಾನ ಕೈಗೊಂಡಿದ್ದಳು. ಸುದೀರ್ಘ ಪ್ರಯಾಣದ ನಂತರ ಆಕೆ ದಕ್ಷಿಣ ಕೊರಿಯಾ ಕರಾವಳಿ ಪ್ರದೇಶ ತಲುಪಿದ್ದಳು. ಆಗ ಅವಳ ವಯಸ್ಸು ಕೇವಲ 16 ವರ್ಷ. ದಕ್ಷಿಣ ಕೊರಿಯಾಕ್ಕೆ ಬಂದ ಸುರೀರತ್ನಳನ್ನು ಅಲ್ಲಿನ ಸ್ಥಳೀಯ ರಾಜ ಕಿಮ್ ಸುರೋ ಅವಳ ಸೌಂದರ್ಯಕ್ಕೆ ಮಾರು ಹೋಗಿದ್ದ. ತನ್ನನ್ನು ವಿವಾಹವಾಗಬೇಕೆಂದು ಕೇಳಿಕೊಂಡಾಗ ಸುರೀರತ್ನ ಅದಕ್ಕೆ ಒಪ್ಪಿಗೆ ಸೂಚಿಸಿ ರಾಜ ಕಿಮ್ ಸುರೋನನ್ನು ಕ್ರಿ.ಶ.48ರಲ್ಲಿ ವಿವಾಹವಾಗಿದ್ದಳು. ಚೀನಾ ಭಾಷೆಯ ಕೆಲವು ಇತಿಹಾಸದ ಪ್ರಕಾರ, ನಿನ್ನ ಮಗಳು ಸುರೀರತ್ನಳನ್ನು ದಕ್ಷಿಣ ಕೊರಿಯಾಕ್ಕೆ ಕಳುಹಿಸು, ಅಲ್ಲಿ ರಾಜನನ್ನು ವಿವಾಹವಾಗಲಿ ಎಂದು ಅಯೋಧ್ಯೆಯ ರಾಜನಿಗೆ ಕನಸಲ್ಲಿ ದೇವರು ಬಂದು ಆದೇಶ ನೀಡಿದ್ದ ಎಂದು ತಿಳಿಸಿದೆ. ಸುರೀರತ್ನ ಮತ್ತು ಸುರೋ ದಂಪತಿಗೆ ಹತ್ತು ಗಂಡು ಮಕ್ಕಳಿದ್ದು, ಈ ದಂಪತಿ ಸುಮಾರು 150ಕ್ಕೂ ಅಧಿಕ ವರ್ಷಗಳ ಕಾಲ ಬದುಕಿದ್ದರು ಎಂದು ನಂಬಲಾಗಿದೆ. ದಕ್ಷಿಣ ಕೊರಿಯಾ ಸುರೋ ರಾಜನನ್ನು ವಿವಾಹವಾದ ನಂತರ ಸುರೀರತ್ನ ಹೆಸರನ್ನು ಹೂ ಹ್ವಾಂಗ್ ಓಕ್ ಎಂದು ಬದಲಾಯಿಸಲಾಯಿತು. ದಕ್ಷಿಣ ಕೊರಿಯಾ ರಾಣಿ ಹೂ ಹ್ವಾಂಗ್ ಓಕ್ ಸ್ಮಾರಕವನ್ನು ಅಯೋಧ್ಯೆಯಲ್ಲಿ 2001ರಲ್ಲಿ ಸಾಂಕೇತಿಕವಾಗಿ ಉದ್ಘಾಟಿಸಲಾಗಿತ್ತು.
ಓಕ್ ಸ್ಮಾರಕವನ್ನು ವಿಸ್ತರಣೆ ಮಾಡಬೇಕೆಂದು 2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ದಕ್ಷಿಣ ಕೊರಿಯಾ ಮಾಜಿ ಅಧ್ಯಕ್ಷ ಮೂನ್ ಜಾಯೆ ಅವರ ನೇತೃತ್ವದಲ್ಲಿ MoUಗೆ ಸಹಿ ಹಾಕಲಾಗಿತ್ತು. 2022ರಲ್ಲಿ ರಾಣಿಯ ಸುಂದರ ಸ್ಮಾರಕದ ಪಾರ್ಕ್ ಅನ್ನು ಉದ್ಘಾಟಿಸಲಾಗಿತ್ತು. ಸುರೀರತ್ನ ಸ್ಮಾರಕ ಪಾರ್ಕ್ ಅನ್ನು ಅಯೋಧ್ಯೆಯ ಸರಯೂ ನದಿ ತಟದ ಸಮೀಪ ನಿರ್ಮಿಸಲಾಗಿದೆ. ಇದಕ್ಕಾಗಿ 21 ಕೋಟಿ ರೂಪಾಯಿ ವ್ಯಯಿಸಲಾಗಿದೆ. ಸ್ಮಾರಕದ ಆಗ್ನೇಯ ಭಾಗದಲ್ಲಿ ರಾಣಿ ಹೂ ಹ್ವಾಂಗ್ ಓಕ್ ಪ್ರತಿಮೆ ಇದ್ದು, ಈಶಾನ್ಯ ಭಾಗದಲ್ಲಿ ರಾಜ ಕಿಮ್ ಸುರೋ ಪ್ರತಿಮೆ ಇದೆ. ಉತ್ತರ ಪ್ರದೇಶ ಪ್ರವಾಸೋದ್ಯಮ ಇಲಾಖೆಯ ಮಾಹಿತಿ ಪ್ರಕಾರ, ಸುಮಾರು 60 ಲಕ್ಷ ರಾಜ ಸುರೋ ವಂಶಸ್ಥ ಜನರು ಅಯೋಧ್ಯೆಯನ್ನು ತಮ್ಮ ಮಾತೃಭೂಮಿ ಎಂದು ಪರಿಗಣಿಸುತ್ತಾರೆ. 2019ರಲ್ಲಿ ಭಾರತ ಸರ್ಕಾರ ರಾಣಿಯ ಗೌರವಾರ್ಥವಾಗಿ 25 ರೂಪಾಯಿ ಹಾಗೂ 5 ರೂಪಾಯಿ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿತ್ತಾಗಿದೆ.
3 Comments