ನವದೆಹಲಿ: ವೈರಲ್ ವಿಡಿಯೋ ಒಂದರ ಮೂಲಕ ದೇಶದ ಗಮನ ಸೆಳೆದಿದ್ದ ತರಕಾರಿ ವ್ಯಾಪಾರಿಯೊಬ್ಬರನ್ನು ತನ್ನ ಮನೆಗೆ ಕರೆಸಿ ಅವರ ಜೊತೆಗೆ ಊಟ ಮಾಡುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸುದ್ದಿಯಾಗಿದ್ದಾರೆ.
ಏರುತ್ತಿರುವ ಟೊಮೆಟೋ ಬೆಲೆ ಬಗ್ಗೆ ನವದೆಹಲಿಯ ಆಝಾದ್ ಪುರ್ ಮಾರುಕಟ್ಟೆ ಪ್ರದೇಶದಲ್ಲಿ ರಾಮೇಶ್ವರ್ ಎಂಬ ತರಕಾರಿ ವ್ಯಾಪಾರಿಯಪಬ್ಬರು ಕಣ್ಣೀರು ಹಾಕುವ ವಿಡಿಯೋ ಒಂದನ್ನು ರಾಹುಲ್ ಗಾಂಧಿ ಜುಲೈನಲ್ಲಿ ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಪೋಸ್ಟ್ ಮಾಡಿದ್ದರು.
ಈ ವಿಡಿಯೋದಲ್ಲಿ ರಾಮೇಶ್ವರ್ ಅವರು, ‘ಟೊಮೆಟೋ ಬೆಲೆ ಬಹಳಷ್ಟು ಹೆಚ್ಚಾಗಿದ್ದು, ನನ್ನಲ್ಲಿ ಅದನ್ನು ಖರೀದಿಸುವಷ್ಟು ಹಣವಿಲ್ಲ..’ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದರು.
ಈ ವಿಡಿಯೋವನ್ನು ಶೇರ್ ಮಾಡುತ್ತಾ ರಾಹುಲ್ ಗಾಂಧಿ ‘ಭಾರತ ಎರಡು ವರ್ಗಗಳಾಗಿ ವಿಭಜನೆಗೊಂಡಿದೆ’ ಎಂದು ಬರೆದುಕೊಂಡಿದ್ದರು.
ಬಳಿಕ ಇದರ ಫಾಲೋ-ಅಪ್ ವಿಡಿಯೋದಲ್ಲಿ ರಾಮೇಶ್ವರ್ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿಯಾಗಲು ಬಯಸುತ್ತೇನೆ ಎಂದು ಹೇಳಿದ್ದರು.
ಆ ವ್ಯಾಪಾರಿಯ ಮನದಿಚ್ಛೆಯನ್ನು ಇದೀಗ ರಾಹುಲ್ ಗಾಂಧಿ ಪೂರೈಸಿದ್ದು, ಅವರನ್ನು ತನ್ನ ಮನೆಗೆ ಕರೆಸಿದ್ದು ಮಾತ್ರವಲ್ಲದೇ ಅವರ ಜೊತೆ ಕುಳಿತು ಊಟ ಮಾಡುವ ಮೂಲಕ ಸರಳತನ ಮೆರೆದಿದ್ದಾರೆ.
ಇಷ್ಟು ಮಾತ್ರವಲ್ಲದೇ ಈ ಕ್ಷಣಗಳ ಫೊಟೋವನ್ನು ರಾಹುಲ್ ಗಾಂಧಿ ಅವರು ಎಕ್ಸ್ (ಈ ಹಿಂದೆ ಟ್ವಿಟರ್ ಎಂದು ಕರೆಯಲಾಗುತ್ತಿತ್ತು) ಅಕೌಂಟ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
‘ರಾಮೇಶ್ವರ್ ಜಿ ಒಬ್ಬ ಲವಲವಿಕೆಯ ವ್ಯಕ್ತಿ! ಕೋಟ್ಯಂತರ ಭಾರತೀಯರಲ್ಲಿರವ ಜನ್ಮಜಾತ ಗುಣವನ್ನು ಇವರಲ್ಲಿ ನಾವು ಕಾಣಬಹುದಾಗಿದೆ, ವ್ಯತಿರಿಕ್ತ ಸನ್ನಿವೇಶದಲ್ಲೂ ಯಾರು ನಗುನಗುತ್ತಾ ಮುಂದಕ್ಕೆ ಸಾಗುತ್ತಾರೋ, ಅವರೇ ನಿಜವಾದ ‘ಭಾರತ ಭಾಗ್ಯ ವಿಧಾತ’” ಎಂದು ರಾಹುಲ್ ಗಾಂಧಿ ಅವರು ಈ ಫೊಟೋದ ಜೊತೆಗೆ ಬರೆದುಕೊಂಡಿದ್ದಾರೆ.
रामेश्वर जी एक ज़िंदादिल इंसान हैं!
उनमें करोड़ों भारतीयों के सहज स्वभाव की झलक दिखती है।
विपरीत परिस्थितियों में भी मुस्कुराते हुए मज़बूती से आगे बढ़ने वाले ही सही मायने में ‘भारत भाग्य विधाता’ हैं। pic.twitter.com/DjOrqzLwhj
— Rahul Gandhi (@RahulGandhi) August 14, 2023