ಬೆಂಗಳೂರು: ರಾಜ್ಯದಲ್ಲೀಗ ಹುಲಿ ಉಗುರಿನ ವಿವಾದ ಸಾಕಷ್ಟು ಸದ್ದು ಮಾಡುತ್ತಿದೆ. ಹುಲಿ ಉಗುರು ಧರಿಸಿದ ಆರೋಪದ ಮೇಲೆ ಬಿಗ್ ಬಾಸ್ ಮನೆಯಲ್ಲಿದ್ದ ವರ್ತೂರು ಸಂತೋಷ್ ಅವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ ಬಳಿಕ ಇನ್ನುಳಿದ ಸೆಲೆಬ್ರಿಟಿ ಮೇಲೂ ಕಣ್ಣು ಬಿದ್ದಿದೆ. ಖ್ಯಾತ ನಟ ದರ್ಶನ್ ಅವರು ಕೂಡ ಹುಲಿ ಉಗುರಿನ ಲಾಕೆಟ್ ಧರಿಸಿದ್ದಾರೆ ಎಂಬ ಆರೋಪ ಎದುರಾಗಿದೆ. ಅಲ್ಲದೇ ವಿನಯ್ ಗುರೂಜಿ ಅವರು ಹುಲಿ ಚರ್ಮದ ಮೇಲೆ ಕುಳಿತಿದ್ದಾರೆ ಎಂದು ಆರೋಪಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ವ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್ ಅವರು ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಇದರಿಂದ ದರ್ಶನ್ ಹಾಗೂ ವಿನಯ್ ಗುರೂಜಿಗೆ ಕಾನೂನಿನ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ದರ್ಶನ್ ಬಂಗಾರದ ಚೈನ್ ಹಾಕಿದ್ದಾರೆ. ಅದರಲ್ಲಿ ಹುಲಿಯ ಉಗುರು ಇದೆ. ಅವರಿಂದ ಕಾನೂನಿನ ಉಲ್ಲಂಘನೆ ಆಗಿದೆ. ವಿನಯ್ ಗುರೂಜಿ ಹುಲಿಯ ಚರ್ಮದ ಮೇಲೆ ಕೂತಿದ್ದಾರೆ. ಹುಲಿಯ ಉಗುರು ಇದ್ದ ಕಾರಣಕ್ಕೆ ವರ್ತೂರು ಸಂತೋಷ ಅವರನ್ನು ಬಂಧಿಸಿದ್ದೀರಿ. ಅದೇ ರೀತಿ ನಟ ದರ್ಶನ್, ವಿನಯ್ ಗುರೂಜಿಯನ್ನೂ ಕರೆಸಿ ವಿಚಾರಿಸಿ. ಅವರು ಧರಿಸಿದ್ದು ಅಸಲಿನೋ ಅಥವಾ ನಕಲಿಯೋ ಎಂಬುದು ಅಧಿಕಾರಿಗಳು ಪರಿಶೀಲಿಸಬೇಕು. ದರ್ಶನ್ ಅವರು ಅರಣ್ಯ ರಾಯಭಾರಿ ಆಗಿದ್ದಾರೆ. ಅವರಿಗೆ ಕನಿಷ್ಠ ಪ್ರಜ್ಞೆ ಇಲ್ಲವೇ? ಅವರು ಧರಿಸಿದ ಹುಲಿ ಉಗುರು ಅಸಲಿಯೋ ಅಥವಾ ನಕಲಿಯೋ ಅನ್ನೋದನ್ನು ಪರಿಶೀಲನೆ ಮಾಡೋದು ಅರಣ್ಯಾಧಿಕಾರಿಗಳ ಕಾರ್ಯ’ ಎಂದು ಶಿವಕುಮಾರ್ ಹೇಳಿದ್ದಾರೆ.
