ಮಂಗಳೂರಿನ ಸಂಸ್ಥೆಯೊಂದರ ಶಿಕ್ಷಕಿಯಿಂದ ಶ್ರೀರಾಮನ ಅವಹೇಳನ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಶಿಕ್ಷಕಿ ವಿರುದ್ದ ವಿದ್ಯಾರ್ಥಿ ಪೋಷಕರಾದ ಶರತ್ ಕುಮಾರ್ ಎಂಬವವರು ಪಾಂಡೇಶ್ವರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವಿದ್ಯಾರ್ಥಿಗಳಿಗೆ ಹಿಂದೂ ದೇವರ ಮೇಲಿನ ನಂಬಿಕೆ ಹೋಗುವಂತೆ ಕ್ರೈಸ್ತ ಮತವನ್ನು ವೈಭವೀಕರಿಸಿ ಮತಾಂತರಕ್ಕೆ ಪ್ರೇರೇಪಿಸುತ್ತಿರುವ ಕುರಿತು ದೂರು ನೀಡಲಾಗಿದೆ.
ಶಿಕ್ಷಕಿ ಫೆ.8 ರಂದು “Work is worship’ ಎಂಬ ವಿಷಯ ಬಗ್ಗೆ ಪಾಠ ಮಾಡುತ್ತಿದ್ದರು. ಈ ವೇಳೆ ಹಿಂದೂ ಧರ್ಮದ ವಿರುದ್ಧ ಹಿಂದೂ ದೇವರುಗಳ ಬಗ್ಗೆ, ನಮ್ಮ ದೇಶದ ಪ್ರಧಾನಿಗಳ ಬಗ್ಗೆ ಹಾಗೂ ಹಿಂದೂ ಧರ್ಮದ ಅಸ್ತಿತ್ವದ ಬಗ್ಗೆ ಪ್ರಶ್ನಿಸಿ, ಹಿಂದೂ ಧರ್ಮವನ್ನು ನಿಂದಿಸಿ, ಹೀಯಾಳಿಸಿ, ತುಚ್ಛವಾಗಿ ಕೆಟ್ಟ ಶಬ್ದಗಳನ್ನು ಪ್ರಯೋಗಿಸಿದ್ದರ ಕುರಿತು ದೂರು ನೀಡಲಾಗಿದ್ದು, ದೂರು ಸ್ವೀಕರಿಸಿದ ಪಾಂಡೇಶ್ವರ ಪೊಲೀಸರು, ಕ್ರಮದ ಭರವಸೆ ನೀಡಿದ್ದಾರೆ. ನಿನ್ನೆ ಜೆರೋಸಾ ಶಾಲೆ ಎದುರು ಮಕ್ಕಳ ಪೋಷಕರು ಪ್ರತಿಭಟನೆ ಮಾಡಿದ್ದರು. ಈ ವೇಳೆ ಮೂರು ದಿನಗಳ ಕಾಲ ಶಾಲಾಡಳಿತ ಮಂಡಳಿ ಸಮಯ ಕೇಳಿದ್ದರು. ಆದರೆ, ಇಂದು ಮತ್ತೆ ಶಾಲೆಯ ಮುಂಭಾಗದಲ್ಲಿ ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದೆ.