ಬೆಂಗಳೂರು: ವೈಯಕ್ತಿಕ ಕಾರಣಕ್ಕೆ ನೇಹಾ ಕೊಲೆಯಾಗಿದ್ದು, ಆರೋಪಿಗಳ ವಿರುದ್ದ ಕಠಿಣ ಕ್ರಮಕ್ಕೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದರು.
ಹುಬ್ಬಳ್ಳಿಯ ಎಂಸಿಎ ವಿದ್ಯಾರ್ಥಿನಿ ನೇಹಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಮತ್ತು ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ್ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಒಂದು ಗಂಟೆಗೂ ಹೆಚ್ಚು ಕಾಲ ಸುದೀರ್ಘ ಸಭೆ ನಡೆಸಿದರು.
ಸಭೆಯಲ್ಲಿ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು. ಆರೋಪಿ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಿ. ಚುನಾವಣಾ ಸಮಯದಲ್ಲಿ ಇಂತಹ ಅಹಿತಕರ ಘಟನೆ ಆಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದಾರಾಮಯ್ಯ, ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಬಹಳ ಚೆನ್ನಾಗಿದೆ. ಯಾವುದೇ ಕೊಲೆ ವೈಯಕ್ತಿಕ ಕಾರಣಕ್ಕೆ ಆಗಿರುತ್ತದೆ. ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರ ಕೆಲಸ. ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುತ್ತದೆ ಅಂದ್ರು.
ನೇಹಾ ತಂದೆ ಆಕ್ರೋಶ ;
ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಪ್ರತಿಕ್ರಿಯೆ ಬಗ್ಗೆ ನೇಹಾ ತಂದೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಕಾಂಗ್ರೆಸ್ ಸದಸ್ಯ ನಿರಂಜನ್ ಹಿರೇಮಠ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಗಳ ಸಾವಿನ ನ್ಯಾಯಕ್ಕಾಗಿ ಆಗ್ರಹಿಸುತ್ತಿರುವ ಅವರು, ” ಇದು ವೈಯಕ್ತಿಕ ಕಾರಣಕ್ಕೆ ಆಗಿರುವ ಕೊಲೆ ಅಲ್ಲ. ನಾನು ಕಾರ್ಪೊರೇಟರ್, ನನಗೆ ಹೀಗಾದರೆ ಬೇರೆಯವರ ಕಥೆ ಏನು? ಮುಖ್ಯಮಂತ್ರಿ ಸಿದ್ದರಾಮಯ್ಯ ಯಾಕೆ ಹೀಗೆ ಹೇಳಿಕೆ ನೀಡುತ್ತಿದ್ದಾರೆ. ನಮಗೂ ಅವರ ಕುಟುಂಬಕ್ಕೂ ಏನು ಸಂಬಂಧ? ತನಿಖೆ ದಿಕ್ಕು ತಪ್ಪಿಸಬೇಡಿ, ಇದು ವೈಯಕ್ತಿಕ ಕಾರಣಕ್ಕೆ ಆದ ಹತ್ಯೆಯಲ್ಲ” ಎಂದು ನೇಹಾ ತಂದೆ ನಿರಂಜನ್ ಹಿರೇಮಠ ಸ್ಪಷ್ಟವಾಗಿ ವಿವರಿಸಿದ್ದಾರೆ.