ಬಂಟ್ವಾಳ: ವೃದ್ಧ ದಂಪತಿಗೆ ಮನೆಲ ಚರ್ಚ್ ಪ್ರಧಾನ ಧರ್ಮಗುರು ಹಲ್ಲೆ ಮಾಡಿರುವ ಘಟನೆ ಫೆ.29 ರಂದು ನಡೆದಿದೆ ಎಂದು ವರದಿಯಾಗಿದೆ.
ಚರ್ಚ್ ಧರ್ಮಗುರು ಫಾ.ನೆಲ್ಸನ್ ಓಲಿವೆರಾರವರು ಪುಣಚ ಗ್ರಾಮದ ಎರ್ಮೆತ್ತಡ್ಕ ನಿವಾಸಿ ಗ್ರೆಗರಿ ಮೊಂತೇರೊ(79ವ.) ದಂಪತಿ ಮನೆಗೆ, ವಾರ್ಷಿಕ ಮನೆ ಪ್ರಾಥನೆ ನಿಮಿತ್ತ ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಈ ಸಂದರ್ಭದಲ್ಲಿ ಧರ್ಮಗುರು ಫಾ.ನೆಲ್ಸನ್ ರವರು ಪ್ರಾಯಸ್ಥ ದಂಪತಿ ಚರ್ಚ್ ಗೆ ಯಾವುದೇ ದೇಣಿಗೆ, ವಂತಿಗೆ ನೀಡದೆ ಸಹಕರಿಸುತ್ತಿಲ್ಲ ಎಂದೆಲ್ಲ ಹೇಳಿ ಆ ದಂಪತಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಮಾತ್ರವಲ್ಲ ಕಾಲರ್ ಹಿಡಿದು ಮಾರುದ್ಧ ದೂರ ಎಳೆದುಕೊಂಡು ಹೋಗಿ ಹೊಡೆಯುತ್ತಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಮಕ್ಕಳಿಲ್ಲದಿರುವ ಪ್ರಾಯಸ್ಥ ಆ ದಂಪತಿಯ ಕೂಗನ್ನು ಯಾರು ಕೇಳುತ್ತಿಲ್ಲ, ಅವರ ಸಮಸ್ಯೆಗಳಿಗೆ ಸ್ಪಂದಿಸುವವರು ಯಾರು ಎಂಬುದು ಸ್ಥಳದಲ್ಲಿರುವರು ಮಾತನಾಡಿಕೊಳ್ಳುತ್ತಿದ್ದಾರೆ.
ಪಾದ್ರಿ ಅಮಾನತು: ವಿಟ್ಲ ಮನೆಲಾ ಚರ್ಚ್ ವ್ಯಾಪ್ತಿಯಲ್ಲಿ ವೃದ್ಧ ದಂಪತಿ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ ಚರ್ಚ್ ಪಾದ್ರಿಯನ್ನು ಕರ್ತವ್ಯದಿಂದ ಅಮಾನತುಗೊಳಿಸಿ ಮಂಗಳೂರು ಕ್ರೈಸ್ತ ಧರ್ಮಪ್ರಾಂತ ಆದೇಶ ಹೊರಡಿಸಿದೆ.
ಘಟನೆಯ ಆರೋಪಿಯಾಗಿರುವ ಮನೆಲಾ ಚರ್ಚ್ ಧರ್ಮಗುರು ಫಾ. ನೆಲ್ಸನ್ ಓಲಿವೆರಾ ಅವರ ಚರ್ಚಿನ ಧಾರ್ಮಿಕ ಕರ್ತವ್ಯಗಳಿಗೆ ಬೇರೋಬ್ಬ ಧರ್ಮಗುರುವನ್ನು ನೇಮಕ ಮಾಡಲಾಗಿದೆ. ಘಟನೆಯ ಬಗ್ಗೆ ತೀವ್ರ ವಿಷಾದ ವ್ಯಕ್ತಪಡಿಸಿದ ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ ಆಡಳಿತ ಹಲ್ಲೆ ಬಗ್ಗೆ ಕಾನೂನಿನಡಿ ಪ್ರಕರಣ ದಾಖಲಾಗಿದ್ದು ಕಾನೂನು ಒಂದು ಕಡೆ ತನಿಖೆ ನಡೆಸುತ್ತಿದ್ದರೆ ಧರ್ಮ ಪ್ರಾಂತ ಕೂಡ ತನ್ನ ಆಂತರಿಕ ತನಿಖೆಯನ್ನು ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ.