ಚಿಕ್ಕಮಗಳೂರು: ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಪ್ರಯಾಣಿಕರ ಮೇಲೆ ವೇಗವಾಗಿ ಬಂದ ಖಾಸಗಿ ಬಸ್ಸೊಂದು ಹರಿದ ಪರಿಣಾಮ 15 ವರ್ಷದ ಶಾಲಾ ಬಾಲಕಿ ಮೃತಪಟ್ಟಿದ್ದು, ಹಲವರು ಗಾಯಗೊಂಡ ಘಟನೆ ಜಿಲ್ಲೆಯ ತರಿಕೆರೆ ತಾಲೂಕಿನ ಕಾವಲ್ ದುಗ್ಲಾಪುರ ಗ್ರಾಮದಲ್ಲಿ ನಡೆದಿದೆ. ಗಾಯಾಳುಗಳಲ್ಲಿ ಬಾಲಕಿಯೊಬ್ಬಳ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ತುಳಸಿ ಎಂಬ ಬಾಲಕಿಯೇ ಮೃತಪಟ್ಟ ದುರ್ದೈವಿಯಾಗಿದ್ದು, 14 ವರ್ಷದ ಬಾಲಕಿ ನಿವೇದಿತಾ ಎಂಬಾಕೆಯ ಸ್ಥಿತಿ ಗಂಬೀರವಾಗಿದೆ.
ಗಾಯಾಳುಗಳನ್ನು ತಕ್ಷಣವೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಮಾರ್ಗದಲ್ಲಿ ಅತೀ ವೇಗವಾಗಿ ಬಂದ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ರಸ್ತೆ ಬದಿಯ ಬಸ್ ನಿಲ್ದಾಣ ಮತ್ತು ಒತ್ತೊಟ್ಟಿಗಿದ್ದ ಮನೆಗಳತ್ತ ನುಗ್ಗಿದೆ.
ಬಸ್ ತಮ್ಮತ್ತ ಏಕಾಏಕಿ ನುಗ್ಗಿ ಬರುತ್ತಿರುವುದನ್ನು ಕಂಡ ಪ್ರಯಾಣಿಕರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿದ್ದ ವಿದ್ಯಾರ್ಥಿಗಳ ಮೇಲೆ ಬಸ್ ಹರಿದು ಬಳಿಕ ಕೊನೆಗೆ ಮನೆಯೊಂದಕ್ಕೆ ಡಿಕ್ಕಿ ಹೊಡೆದು ನಿಂತಿದೆ. ಡಿಕ್ಕಿಯ ರಭಸಕ್ಕೆ ಮನೆಯ ಮೇಲ್ಛಾವಣಿ ಸಂಪೂರ್ಣ ಜಖಂಗೊಂಡಿದೆ.
ಚಾಲಕನ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೇ ಈ ಅಪಘಾತಕ್ಕೆ ಕಾರಣವೆಂದು ತಿಳಿದುಬಂದಿದ್ದು, ಘಟನೆ ನಡೆದ ತಕ್ಷಣ ಬಸ್ ಚಾಲಕ ಸ್ಥಳದಿಂದ ಕಾಲ್ಕಿತ್ತಿದ್ದಾನೆ.
ಈ ಸಂದರ್ಭದಲ್ಲಿ ಆಕ್ರೋಶಗೊಂಡ ಸ್ಥಳೀಯರು ಅಪಘಾತಕ್ಕೆ ಕಾರಣವಾದ ಬಸ್ಸಿನ ಮೇಲೆ ಕಲ್ಲು ತೂರಾಟವನ್ನೂ ಸಹ ನಡೆಸಿದ್ದಾರೆ ಮತ್ತು ಖಾಸಗಿ ಬಸ್ಸುಗಳ ಧಾವಂತಕ್ಕೆ ಕಡಿವಾಣ ಹಾಕದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧವೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.