ಪುತ್ತೂರು: ಇಚ್ಲಂಪಾಡಿ ಗ್ರಾಮದ ಬೀಡುಬೈಲು ನಿವಾಸಿ ಇಚ್ಲಂಪಾಡಿ ಹಾಲು ಉತ್ಪಾದಕರ ಸಂಘದ ಮಾಜಿ ಅಧ್ಯಕ್ಷ, ಚೆಂಡೆ ವಾದಕ ನಾಗರಾಜ ಆರಿಗ (78) ಅವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾಗರಾಜ ಅವರು ಬೀಡುಬೈಲು ಮನೆಯಲ್ಲಿ ಕಳೆದ ಎರಡು ವರ್ಷಗಳಿಂದ ಒಬ್ಬಂಟಿಯಾಗಿ ವಾಸವಾಗಿದ್ದರು. ಮನೆ ಕೆಲಸದವರಾದ ಸುಧಾಕರ ಅವರು ಮೇ 14ರಂದು ರಾತ್ರಿ ಮಲಗಲೆಂದು ಬಂದಾಗ ಮನೆಯಲ್ಲಿ ವಿದ್ಯುತ್ ದೀಪ ಉರಿಯುತ್ತಿರಲಿಲ್ಲ. ನಾಗರಾಜ ಅವರನ್ನು ಕರೆದಾಗಲೂ ಪ್ರತಿಕ್ರಿಯೆ ಬರಲಿಲ್ಲ. ಸ್ಥಳೀಯ ಪರಿಸರದಲ್ಲಿ ಹುಡುಕಾಟ ನಡೆಸಿದಾಗ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ. ಮಾಹಿತಿ ಪಡೆದ ಪುತ್ರಿ ಮೇ 15ರಂದು ಬೆಳಗ್ಗೆ ಬಂದ ಬಳಿಕ ಮೃತದೇಹವನ್ನು ತೆಗೆಯಲಾಯಿತು. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉಪ್ಪಿನಂಗಡಿ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತರು ಮೂವರು ಪುತ್ರಿಯರನ್ನು ಅಗಲಿದ್ದಾರೆ.
ನಾಗರಾಜ ಅವರು ಮೇಳವೊಂದರಲ್ಲಿ ಮೇಲ್ವಿಚರಾಕರಾಗಿ ಗುರುತಿಸಿಕೊಂಡಿದ್ದರು. ಚೆಂಡೆ ವಾದಕರಾಗಿ ಸೇವೆ ಸಲ್ಲಿಸಿದ್ದು ಚೆಂಡೆ ನಾಗರಾಜ ಎಂದೇ ಗುರುತಿಸಿಕೊಂಡಿದ್ದರು. ಇಚ್ಲಂಪಾಡಿ ದೇವಳ ಬ್ರಹ್ಮಕಲಶ ಸಮಿತಿಯಲ್ಲಿ ಸಕ್ರಿಯವಾಗಿ ಕೆಲಸ ಮಾಡಿಕೊಂಡಿದ್ದರು.