ಹಾಸನ: ಚಿರತೆ ಕಂಡರೆ ಮಾರು ದೂರ ಓಡಿಹೋಗಿ ಜೀವ ಉಳಿದರೆ ಸಾಕಪ್ಪ ಎಂದು ಹೇಳುವವರೇ ಜಾಸ್ತಿ. ಆದರೆ ಹಾಸನ ಜಿಲ್ಲೆಯ ಬಾಗಿನಾಳು ಗ್ರಾಮದ ಹೊರವಲಯದಲ್ಲಿ ತನ್ನ ಮೇಲೆ ದಾಳಿ ಮಾಡಿದ ಚಿರತೆಯನ್ನು ಜೀವಂತವಾಗಿ ಸೆರೆಹಿಡಿದ ಯವಕ, ಅದನ್ನು ಬೈಕ್ಗೆ ಕಟ್ಟಿಕೊಂಡು ಹೋಗಿ ಅರಣ್ಯ ಅಧಿಕಾರಿಗಳಿಗೆ ಒಪ್ಪಿಸಿದ್ದಾನೆ.
ಜಿಲ್ಲೆಯ ಅರಸೀಕೆರೆ ತಾಲೂಕಿನ ಗಂಡಸಿ ಹೋಬಳಿಯ ಬಾಗಿನಾಳು ಗ್ರಾಮಕ್ಕೆ ನುಗ್ಗಿದ ಚಿರತೆ ಜಮೀನಿಗೆ ಹೋಗುತ್ತಿದ್ದ ಯುವಕನ ಮೇಲೆ ದಾಳಿ ಮಾಡಿದೆ. ಯುವಕ ಚಿರತೆಯನ್ನು ಓಡಿಸಲು ಮುಂದಾಗಿದ್ದು, ಮತ್ತೆ ದಾಳಿ ಮಾಡಿದೆ. ದಾಳಿ ವೇಳೆ ಕೈ ಮತ್ತು ಕಾಲು, ದೇಹಕ್ಕೆ ಗಾಯವಾಗಿದ್ದರೂ, ಚಿರತೆಯೊಂದಿಗೆ ಸೆಣಸಾಡಿದ್ದಾನೆ. ಜಮೀನಿಗೆ ಕೊಂಡೊಯ್ದಿದ್ದ ಬೈಕ್ ನಲ್ಲಿ ಹಗ್ಗ ತಂದಿದ್ದು, ಅದರಿಂದಲೇ ದಾಳಿ ಮಾಡಲು ಮುಂದಾದ ಚಿರತೆಗೆ ಕುಣಿಕೆ ಹಾಕಿ ಬಿಗಿದಿದ್ದಾನೆ. ಚಿರತೆಯ ಕಾಲುಗಳು ಹಾಗೂ ದೇಹಕ್ಕೆ ಹಗ್ಗ ಬಿಗಿದು ದಾಳಿ ಮಾಡಲು ಸಾಧ್ಯವಾಗದ ರೀತಿ ಮಾಡಿದ್ದಾನೆ.
ಬಳಿಕ ದೇಹದ ಭಾಗಕ್ಕೆ ಬಿಗಿದಿದ್ದ ಹಗ್ಗವನ್ನು ಬಿಚ್ಚಿ ನಾಲ್ಕು ಕಾಲುಗಳಿಗೆ ಕಟ್ಟಿದ್ದಾನೆ. ಕೋಲುಗಳ ಸಹಾಯದಿಂದ ಬೈಕ್ನ ಹಿಂಭಾಗದಲ್ಲಿ ಕಟ್ಟಿಕೊಂಡು ಸೀದಾ ಗ್ರಾಮಕ್ಕೆ ಹೋಗಿ ನಂತರ ಚಿರತೆಯನ್ನು ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ್ದಾನೆ.