ಮಂಗಳೂರು: ಕರಾವಳಿಯನ್ನು ರಾಜ್ಯದ ಉಳಿದ ಪ್ರದೇಶಗಳಿಗೆ ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿರುವ ಚಾರ್ಮಾಡಿ ಘಾಟ್ ಅಭಿವೃದ್ಧಿಗೆ ಕೇಂದ್ರ ಸರಕಾರದ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹಸಿರು ನಿಶಾನೆ ತೋರಿಸಿದೆ.
ಚಾರ್ಮಾಡಿ ಹಳ್ಳದಿಂದ ಘಾಟ್‌ನ 11ನೇ ತಿರುವಿನ ತನಕದ 11.2 ಕಿ.ಮೀ. ವ್ಯಾಪ್ತಿಯ ಹೆದ್ದಾರಿ 490 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಯಾಗಲಿದೆ. ಇದಕ್ಕೆ ಸಂಬಂಧಿಸಿದ ಡಿಪಿಆರ್ ಸಿದ್ಧಪಡಿಸಿ ವರದಿ ಸಲ್ಲಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮಂಗಳೂರು -ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯ ಮಂಗಳೂರು -ತುಮಕೂರು ವಿಭಾಗದಲ್ಲಿ ಬರುವ ಚಾರ್ಮಾಡಿ ಘಾಟಿ, ದಕ್ಷಿಣ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ 25 ಕಿ.ಮೀ. ವ್ಯಾಪ್ತಿ ಹೊಂದಿದೆ. ಈ ಪೈಕಿ ದಕ್ಷಿಣ ಕನ್ನಡ ವಿಭಾಗದ 11.20 ಕಿ.ಮೀ. ರಸ್ತೆ ಅಭಿವೃದ್ಧಿ ಹೊಂದಲಿದೆ.
ರಸ್ತೆಯು 10 ಮೀ. ಅಗಲ ಇರಲಿದ್ದು, ದ್ವಿಪಥ ರಸ್ತೆಯಾಗಲಿದೆ. ಕೆಲವೊಂದು ಕಡೆ ರಸ್ತೆ ನೇರವಾಗಲಿದ್ದು, ತಿರುವುಗಳು ಕಡಿಮೆಯಾಗುವ ನಿರೀಕ್ಷೆ ಇದೆ. ತಡೆಗೋಡೆ ನಿರ್ಮಾಣ, ಬಂಡೆ, ಗುಡ್ಡ ಕುಸಿತವಾಗದಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮುಂದಿನ ದಿನಗಳಲ್ಲಿ ಯೋಜನೆ ರೂಪಿಸಲಾಗುತ್ತದೆ. ಹೆದ್ದಾರಿ ಅಭಿವೃದ್ಧಿಯಿಂದ ವಾಹನ ಸವಾರರ ಸಮಯ ಉಳಿತಾಯ ವಾಗಲಿದೆ. ಘಾಟ್ ವಿಭಾಗ ಅಭಿವೃದ್ಧಿ ಹೊಂದುವುದರಿಂದ ಸಂಚಾರದ ಅಪಾಯ ದೂರವಾಗಲಿವೆ.