ಬೆಂಗಳೂರು: ಬಿಜೆಪಿ ಟಿಕೆಟ್ ನೆಪದಲ್ಲಿ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ 5 ಕೋಟಿ ರೂ. ವಂಚಿಸಿರುವ ಆರೋಪ ಹೊತ್ತಿರುವ ಚೈತ್ರಾ ಕುಂದಾಪುರ ವಂಚನೆ ಪ್ರಕರಣ ಬಗೆದಷ್ಟು ಮತ್ತಷ್ಟು ಬಯಲಾಗುತ್ತಿದೆ.
ಕೋಟ್ಯಂತರ ರೂ. ಹಣ, ದುಬಾರಿ ಬೆಲೆಯ ಕಾರು, ಚಿನ್ನಾಭರಣ ಇದೆಲ್ಲದರ ಮೂಲಗಳನ್ನು ಪೊಲೀಸರು ಪತ್ತೆ ಹಚ್ಚುವ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ವಂಚನೆಯ ಹಣದಿಂದ ಕಾರು ಖರೀದಿಸಿದ್ದಾರೆ ಎನ್ನಲಾಗಿರುವ ಕಾರು ಬಾಗಲಕೋಟೆಯ ಮುಧೋಳ ತಾಲೂಕಿನಲ್ಲಿ ಪತ್ತೆಯಾಗಿದೆ ಎನ್ನುವ ಅಂಶ ಈಗ ಹೊರಬಿದ್ದಿದೆ.
ಮುಧೋಳ ತಾಲೂಕಿನಲ್ಲಿರುವ ಕಿರಣ್ ಎಂಬುವರು ಡ್ರೈವಿಂಗ್ ಸ್ಕೂಲ್ ನಡೆಸುತ್ತಿದ್ದು, ಆತನಿಗೆ ಕಾರನ್ನು ಮಹಾರಾಷ್ಟ್ರದ ಸೊಲ್ಲಾಪುರದಿಂದ ತಾನು ಕೊಂಡಿರುವ ಕಿಯಾ ಸೆಲ್ಟೋಸ್ ಕಾರನ್ನು ತರುವಂತೆ ಚೈತ್ರಾ ಸೂಚಿಸಿದ್ದರು ಎನ್ನಲಾಗಿದೆ. ಹಾಗಾಗಿ, ಆತ ಸೊಲ್ಲಾಪುರದಿಂದ ಆತ ಕಾರನ್ನು ತಂದು, ಮುಧೋಳದಲ್ಲಿರುವ ತನ್ನ ಮನೆಯ ಮುಂದೆ ನಿಲ್ಲಿಸಿಕೊಂಡಿದ್ದ. ಪ್ರಕರಣ ತನಿಖೆ ನಡೆಸುತ್ತಿರುವ ಪೊಲೀಸರು, ಮುಧೋಳದಲ್ಲಿರುವ ಕಾರನ್ನು ಪತ್ತೆ ಹಚ್ಚಿ, ಅದನ್ನು ಜಪ್ತಿ ಮಾಡಿದ್ದಾರೆ.
ಇದೇ ವೇಳೆ, ಚೈತ್ರಾಗೆ ಸೇರಿದ 1.8 ಕೋಟಿ ರೂ. ನಿಶ್ಚಿತ ಠೇವಣಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದರ ಜೊತೆಗೆ 65 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನೂ ಜಪ್ತಿ ಮಾಡಲಾಗಿದೆ. ಉಪ್ಪೂರು ಕೋ ಆಪರೇಟಿವ್ ಸೊಸೈಟಿಯಲ್ಲಿನ ಜಂಟಿ ಖಾತೆಯೊಂದರಲ್ಲಿ ಇರಿಸಲಾಗಿದ್ದ 40 ಲಕ್ಷ ರೂ.ಗಳನ್ನು ಸಹ ವಶಕ್ಕೆ ಪಡೆಯಲಾಗಿದೆ. ಸೊಸೈಟಿಯಲ್ಲಿ ಚೈತ್ರಾ – ಶ್ರೀಕಾಂತ್ ಎಂಬ ಹೆಸರುಗಳಲ್ಲಿ ಈ ಜಂಟಿ ಖಾತೆ ತೆರೆಯಲಾಗಿತ್ತು ಎಂದು ಪೊಲೀಸರು ಮಾಹಿತಿ ಕಲೆಹಾಕಿದ್ದಾರೆ ಮತ್ತು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.