ಮಂಗಳೂರು : ನಾಪತ್ತೆಯಾಗಿರೋ ದೇರಳಕಟ್ಟೆಯ ಖಾಸಗಿ ವಿವಿಯ ಪಿಹೆಚ್ಡಿ ವಿದ್ಯಾರ್ಥಿನಿ ಚೈತ್ರಾ ಕತಾರ್ ದೇಶಕ್ಕೆ ಹೋಗಿದ್ದಾರೆ ಎಂಬ ಮಾಹಿತಿ ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.
ನಾಪತ್ತೆಯಾಗಿದ್ದ ಚೈತ್ರಾ ಬಂಟ್ವಾಳದ ನೇರಳಕಟ್ಟೆ ನಿವಾಸಿ ಸದ್ಯ ಪುತ್ತೂರಿನಲ್ಲಿ ನೆಲೆಸಿರುವ ಯುವಕನ ಜೊತೆ ಹೋಗಿದ್ದಾಗಿ ಅನುಮಾನ ವ್ಯಕ್ತವಾಗಿತ್ತು. ಚೈತ್ರಾ ನಾಪತ್ತೆ ಬಗ್ಗೆ ಚೈತ್ರಾ ದೊಡ್ಡಪ್ಪ ಉಳ್ಳಾಲ ಪೊಲೀಸರಿಗೆ ದೂರು ನೀಡಿ ಪತ್ತೆ ಮಾಡಿಕೊಡುವಂತೆ ಕೋರಿದ್ದರು. ಈ ಬಗ್ಗೆ ತನಿಕೆ ನಡೆಸಿದ ಪೊಲೀಸರಿಗೆ ಚೈತ್ರಾ ಸ್ಕೂಟರ್ ಸುರತ್ಕಲ್ ನಲ್ಲಿ ಪತ್ತೆಯಾಗಿದ್ದು, ಅಲ್ಲೇ ಎಟಿಎಂ ನಿಂದ ಹಣ ಡ್ರಾ ಮಾಡಿರುವ ವಿಚಾರ ಕೂಡಾ ಗೊತ್ತಾಗಿತ್ತು.
ಚೈತ್ರಾ ಕೇರಳ ಅಥವಾ ಬೆಂಗಳೂರಿಗೆ ಹೋಗಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪೊಲೀಸರು ಅಲ್ಲೂ ಕೂಡಾ ಹುಡುಕಾಟ ನಡೆಸಿದ್ದಾರೆ.ತನಿಖೆ ನಡೆಸಿದ ಪೊಲೀಸರಿಗೆ ಚೈತ್ರ ಬೆಂಗಳೂರಿನಿಂದ ಹಿಮಾಚಲ ಪ್ರದೇಶದ ಮನಾಲಿ ಬಳಿಕ ದೆಹಲಿ ಮತ್ತು ದೆಹಲಿಯಿಂದ ವಿದೇಶಕ್ಕೆ ಹೋದ ಬಗ್ಗೆ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ.
ಅಷ್ಟೇ ಅಲ್ಲದೆ ಚೈತ್ರಾ ನಾಪತ್ತೆ ಹಿಂದೆ ಇದ್ದಾನೆ ಎನ್ನಲಾದ ಯುವಕನನ್ನೂ ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದ್ದು, ಆತ ಚೈತ್ರಾ ಜೊತೆ ಇದ್ದ ಅನ್ನೋ ಯಾವುದೇ ಸಾಕ್ಷ್ಯ ದೊರೆಯದ ಕಾರಣ ಆತನನ್ನು ಬಿಟ್ಟು ಕಳುಹಿಸಿದ್ದಾರೆ ಎನ್ನಲಾಗಿದೆ.
ಚೈತ್ರಾ ಸದ್ಯ ಕತಾರ್ ದೇಶದ ಹೆಣ್ಮಕ್ಕಳ ಪಿ.ಜಿ ಒಂದರಲ್ಲಿ ನೆಲೆಸಿದ್ದಾಳೆಂದು ತಿಳಿದು ಬಂದಿದೆ. ಕತಾರ್ ದೇಶದ ಇಂಡಿಯನ್ ಎಂಬೇಸಿಯಿಂದ ಚೈತ್ರಾ ಉಳ್ಳಾಲ ಪೊಲೀಸರಿಗೆ ಇ-ಮೇಲ್ ಮತ್ತು ವಾಟ್ಸಪ್ ಸಂದೇಶ ಕಳಿಸಿದ್ದು ನಾನು ಪ್ರಬುದ್ಧಳಾಗಿದ್ದೇನೆ. ನನ್ನ ಇಷ್ಟದಲ್ಲಿ ನಾನು ಬಂದಿದ್ದೇನೆ. ನನಗೆ ಪ್ರೀತಿ ಮಾಡುವ ಹಕ್ಕಿಲ್ಲವೇ ಎಂದು ಪ್ರಶ್ನಿಸಿದ್ದಾಳೆ ಎಂದು ಪೊಲೀಸ್ ಮೂಲದಿಂದ ತಿಳಿದುಬಂದಿದೆ.