main logo

ಚೈತ್ರಾ ಕುಂದಾಪುರ ಆಸ್ಪತ್ರೆಯಿಂದ ಡಿಸ್ಚಾರ್ಜ್–ಇನ್ನು ಅಸಲಿ ವಿಚಾರಣೆ ಶುರು!

ಚೈತ್ರಾ ಕುಂದಾಪುರ ಆಸ್ಪತ್ರೆಯಿಂದ ಡಿಸ್ಚಾರ್ಜ್–ಇನ್ನು ಅಸಲಿ ವಿಚಾರಣೆ ಶುರು!

ಬೆಂಗಳೂರು: ಬೈಂದೂರು ಮೂಲದ ಉದ್ಯಮಿಯೊಬ್ಬರಿಗೆ ಕಳೆದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಟಿಕೆಟ್ ತೆಗಿಸಿಕೊಡುವುದಾಗಿ ನಂಬಿಸಿ ಕೋಟ್ಯಂತರ ರೂಪಾಯಿಗಳನ್ನು ಪಡೆದುಕೊಂಡು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಿಸಿಬಿ ಪೊಲೀಸರಿಂದ ಬಂಧಿಸಲ್ಟಟ್ಟಿರುವ ಹಿಂದು ನಾಯಕಿ ಮತ್ತು ವಾಗ್ಮಿ ಚೈತ್ರ ಕುಂದಾಪುರ ಮತ್ತು ಆಕೆಯ ಸಹಚರರ ತೀವ್ರ ವಿಚಾರಣೆ ನಡೆಯುತ್ತಿದೆ.

ಈ ನಡುವೆ ವಿಚಾರಣೆ ಸಂದರ್ಭದಲ್ಲಿ ಬಾಯಲ್ಲಿ ನೊರೆ ಬಂದು ಕುಸಿದು ಬಿದ್ದಿದ್ದ ಚೈತ್ರಾ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.

ಇದೀಗ ಚೈತ್ರಾ ಕುಂದಾಪುರ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಹಿನ್ನಲೆಯಲ್ಲಿ ಅವರನ್ನು ಇಂದು (ಸೆ.18) ಆಸ್ಪತ್ರೆಯಿಂದ ಬಿಡುಗಡೆ ಮಾಡಿ ಮತ್ತೆ ವಿಚಾರಣೆಗಾಗಿ ಸಿಸಿಬಿ ಕಚೇರಿಗೆ ಕರೆತರಲಾಗಿದೆ. ಇನ್ನು ಅವರ ಅಸಲಿ ವಿಚಾರಣೆ ಪ್ರಾರಂಭಗೊಳ್ಳಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಚಿಕ್ಕಮಗಳೂರು: ಚೈತ್ರಾ ಕುಂದಾಪುರ ಓಡಾಡಿದ ಜಾಗವನ್ನು ತೀರ್ಥ ಹಾಕಿ ಶುದ್ಧ ಮಾಡಿದ ಗ್ರಾಮಸ್ಥರು

ಇನ್ನು, ಚೈತ್ರಾಳ ದೇಹಾರೋಗ್ಯ ಸ್ಥಿತಿ ನಾರ್ಮಲ್ ಆಗಿದ್ದು ಮಾಡಲಾಗಿರುವ ಎಲ್ಲಾ ಟೆಸ್ಟ್ ಗಳಲ್ಲಿಯೂ ಆಕೆಗೆ ಯಾವುದೇ ರೀತಿಯ ಗಂಭೀರ ಸಮಸ್ಯೆಗಳಿರಲಿಲ್ಲ ಎಂದು ತಿಳಿದು ಬಂದಿದೆ.

ಇನ್ನು, ವಿಚಾರಣೆ ಸಂದರ್ಭದಲ್ಲಿ ಬಾಯಲ್ಲಿ ನೊರೆ ಬಂದಿರುವ ವಿಚಾರಕ್ಕೆ ಸಂಬಂಧಿಸಿದಂತೆ, ಇದು ಚೈತ್ರಾ ಆಡಿರುವ ಮಹಾ ಡ್ರಾಮಾ ಎಂಬ ಅಂಶವೂ ಇದೀಗ ಖಚಿತಗೊಂಡಿದ್ದು, ಇದೀಗ ಆಸ್ಪತ್ರೆಯಿಂದ ನೇರವಾಗಿ ವಿಚಾರಣಾ ಸ್ಥಳಕ್ಕೆ ಆಕೆಯನ್ನು ಅಧಿಕಾರಿಗಳು ಕರೆದೊಯ್ದಿರುವ ಕಾರಣ, ಸಿಸಿಬಿ ಪೊಲೀಸರ ಅಸಲೀ ವಿಚಾರಣೆ ಇನ್ನು ಶುರುವಾಗಲಿದೆ!

ಇದನ್ನೂ ಓದಿ: ಚೈತ್ರಾ ಮಾಸ್ಟರ್ ಮೈಂಡ್ – ಉದ್ಯಮಿ ಗೋವಿಂದ ಬಾಬು ವಿರುದ್ಧವೇ EDಗೆ ದೂರು!

ಚೈತ್ರಾಳ ಆರೋಗ್ಯ ಸ್ಥಿತಿಯ ಬಗ್ಗೆ ಡಾ. ದಿವ್ಯ ಪ್ರಕಾಶ್ ಮಾಹಿತಿ ನೀಡಿದ್ದು, ‘ಎಲ್ಲಾ ಪರೀಕ್ಷೆಗಳನ್ನು ಮಾಡಲಾಗಿದ್ದು, ಎಲ್ಲವೂ ನಾರ್ಮಲ್ ಆಗಿದೆ..’ ಎಂದು ಅವರು ಮಾಹಿತಿ ನೀಡಿದ್ದಾರೆ. ಇನ್ನು ಬಾಯಲ್ಲಿ ನೊರೆ ಬಂದಿರುವ ವಿಚಾರಕ್ಕೆ ಸಂಬಂಧಿಸಿ ಮಾಹಿತಿ ನೀಡಿರುವ ವೈದ್ಯರು, ‘ಅದು ಫಂಕ್ಷನಲ್ ಆಗಿ ಆಗಿರುವಂತದ್ದು, ಅವರೇ ಅದನ್ನು ಮಾಡಿಕೊಂಡಿದ್ದಾರೆ. ಫಿಟ್ಸ್ ಸ್ಥಿತಿ ಏನೂ ಕಂಡುಬಂದಿಲ್ಲ, ಬಹುಷಃ ಅದು ಸಾಬೂನು ನೊರೆಯಾಗಿರಬಹುದು..’ ಎಂದು ಹೇಳಿದ್ದಾರೆ.

‘ಆಕೆಯಲ್ಲಿ ಫಿಟ್ಸ್ ಸಮಸ್ಯೆ ಪತ್ತೆಗಾಗಿ ಎಂ.ಆರ್.ಐ ಸ್ಕ್ಯಾನಿಂಗ್ ನಡೆಸಲಾಗಿದೆ ಮಾತ್ರವಲ್ಲದೇ ಇಸಿಜಿ  ಕೂಡ ಮಾಡಲಾಗಿದೆ. ಈ ಎಲ್ಲಾ ಟೆಸ್ಟ್ ರಿಪೋರ್ಟ್ ನಾರ್ಮಲ್ ಆಗಿದೆ. ಆದರೆ ನ್ಯೂರಾಲಜಿಸ್ಟ್ ಕೆಲವೊಂದು ಮಾತ್ರೆಗಳನ್ನು ಕೊಟ್ಟಿದ್ದಾರೆ..’ ಎಂದು ಡಾ. ದಿವ್ಯ ಪ್ರಕಾಶ್ ಮಾಹಿತಿ ನೀಡಿದ್ದಾರೆ.

ಆಸ್ಪತ್ರೆಯಿಂದ ಬಿಡುಗಡೆಗೊಂಡ ಚೈತ್ರಾ ಅವರನ್ನು ಸಿಸಿಬಿ ಅಧಿಕಾರಿಗಳು ವಿಕ್ಟೋರಿಯಾ ಆಸ್ಪತ್ರೆಯ ಹಿಂಬಾಗಿಲಿನ ಮೂಲಕ ಕರೆದೊಯ್ದಿದ್ದಾರೆ. ಇದೀಗ ಆಕೆಯ ವಿಚಾರಣೆ ಮತ್ತೆ ಪ್ರಾರಂಭಗೊಳ್ಳಲಿದ್ದು, ಯಾರಿಗೆಲ್ಲಾ ಹಣ ವರ್ಗಾವಣೆಯಾಗಿದೆ ಮತ್ತು ಈ ಪ್ರಕರಣದಲ್ಲಿ ಯಾರ್ಯಾರ ಕೈವಾಡ ಇದೆ ಎನ್ನುವ ವಿಚಾರಗಳಿಗೆ ಸಂಬಂಧಿಸಿ ಸಿಸಿಬಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸುವ ಸಾಧ್ಯತೆಗಳಿವೆ.

Related Articles

Leave a Reply

Your email address will not be published. Required fields are marked *

error: Content is protected !!