ನವದೆಹಲಿ: ಮುಂಬರುವ ಪಂಚರಾಜ್ಯಗಳ (Assembly Polls) ಚುನಾವಣೆ ಮತ್ತು ಲೋಕಸಭಾ ಚುನಾವಣೆಗಳ (Loka Sabha Poll) ಹಿನ್ನಲೆಯಲ್ಲಿ ಕೇಂದ್ರ ಸರಕಾರವು ಎಲ್.ಪಿ.ಜಿ ಸಿಲಿಂಡರ್ (LPG) ದರವನ್ನು ಕಡಿಮೆ ಮಾಡಿದ್ದು, ಮಧ್ಯಮ ವರ್ಗ ಮತ್ತು ಗೃಹಿಣಿಯರ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ಅಡುಗೆ ಅನಿಲ ಬೆಲೆಯಲ್ಲಿ 200 ರೂಪಾಯಿ ಇಳಿಕೆ ಮಾಡುವ ಮಹತ್ವದ ನಿರ್ಧಾರಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಮಂಗಳವಾರದಂದು (ಆ.29) ಒಪ್ಪಿಗೆ ನೀಡಲಾಗಿದೆ.
ಮಾತ್ರವಲ್ಲದೇ, ಉಜ್ವಲ ಯೋಜನೆಯಡಿಯಲ್ಲಿ (Ujwala Scheme) ಅಡುಗೆ ಅನಿಲ ಪಡೆದುಕೊಳ್ಳುತ್ತಿರುವ ಫಲಾನುಭವಿಗಳಿಗೆ 200 ರೂಪಾಯಿಗಳ ಹೆಚ್ಚುವರಿ ಸಬ್ಸಿಡಿ ಘೋಷಿಸಲಾಗಿದೆ.
ಕೇಂದ್ರ ಸರಕಾರದ ಈ ನಿರ್ಧಾರದಿಂದ, LPG ಸಹಿತ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಮಧ್ಯಮ ಮತ್ತು ಕೆಳ ವರ್ಗದ ಜನತೆಗೆ ತುಸು ನೆಮ್ಮದಿ ಸಿಕ್ಕಿದಂತಾಗಿದೆ.
ಈ ಮೂಲಕ ರಾಷ್ಟ್ರ ರಾಜಧಾನಿಯಲ್ಲಿ 1,103 ರೂಪಾಯಿ ಇದ್ದ 14.2 ಕೆಜಿ ಸಿಲಿಂಡರ್ ಬೆಲೆ ನಾಳೆಯಿಂದ (ಆ.30) 903 ರೂಪಾಯಿಗಳಿಗೆ ಸಿಗಲಿದೆ. ಉಜ್ವಲ ಫಲಾನುಭವಿಗಳಿಗೆ ಇನ್ನು ಮುಂದೆ 703 ರೂಪಾಯಿಗಳಿಗೆ ಸಿಲಿಂಡರ್ ಸಿಗಲಿದೆ.