ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು (ಗುರುವಾರ) ಮಧ್ಯಂತರ ಬಜೆಟ್ ಮಂಡಿಸಲಿದ್ದಾರೆ. ಹಣಕಾಸು ಸಚಿವರಾಗಿ ಸೀತಾರಾಮನ್ ಮಂಡಿಸಲಿರುವ 6ನೇ ಬಜೆಟ್ ಇದಾಗಿದೆ. ಅಲ್ಲದೇ ಪ್ರಧಾನಿ ಮೋದಿ ಸರ್ಕಾರದ 2ನೇ ಅವಧಿಯ ಕೊನೆಯ ಬಜೆಟ್ ಕೂಡ ಆಗಲಿದೆ.
ಲೋಕಸಭೆ ಚುನಾವಣೆಯ ನಂತರ ಸರ್ಕಾರ ರಚನೆಯಾಗುವವರೆಗೆ ಮಧ್ಯಂತರ ಬಜೆಟ್ ಮಧ್ಯಂತರ ಅವಧಿಯ ಹಣಕಾಸಿನ ಅಗತ್ಯಗಳನ್ನು ನೋಡಿಕೊಳ್ಳುತ್ತದೆ. ಹೊಸ ಸರ್ಕಾರದಿಂದ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಾಗುವುದು.
ಲೋಕಸಭೆ ಮತ್ತು ರಾಜ್ಯಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ ಮಾಡುವ ಮೂಲಕ ಸಂಸತ್ತಿನ ಬಜೆಟ್ ಅಧಿವೇಶನ ಬುಧವಾರ ಪ್ರಾರಂಭವಾಯಿತು. ರಾಷ್ಟ್ರಪತಿ ಭಾಷಣದಲ್ಲಿ, 2023 ದೇಶಕ್ಕೆ ಐತಿಹಾಸಿಕ ವರ್ಷವಾಗಿದೆ. ದೇಶವು ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯ ವೇಗವನ್ನು ಮುಂದುವರೆಸಿದೆ ಎಂದು ಹೇಳಿದ್ದರು.
ಈ ಏಪ್ರಿಲ್‌ನಲ್ಲಿ ಪ್ರಾರಂಭವಾಗುವ 2024-25 ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇ.7 ರ ಸಮೀಪಕ್ಕೆ ಬರುವ ನಿರೀಕ್ಷೆಯಿದೆ ಎಂದು ಹಣಕಾಸು ಸಚಿವಾಲಯವು ಪರಿಶೀಲನಾ ವರದಿಯಲ್ಲಿ ತಿಳಿಸಿದೆ.
ಹಿಂದೆಲ್ಲಾ ಫೆಬ್ರುವರಿ ತಿಂಗಳ ಕೊನೆಯ ಕಾರ್ಯದಿನದಂದು ಬಜೆಟ್ ಮಂಡನೆ ಆಗುತ್ತಿತ್ತು. ಬ್ರಿಟಿಷರ ಕಾಲದಿಂದ ಬಂದ ರೂಢಿಯನ್ನೇ ಮುಂದುವರಿಸಲಾಗಿತ್ತು. ಆದರೆ, ಕೆಲ ವರ್ಷಗಳ ಹಿಂದೆ ಬಜೆಟ್ ದಿನವನ್ನು ಫೆಬ್ರುವರಿ 1ಕ್ಕೆ ನಿಗದಿ ಮಾಡಲಾಗಿದೆ. ಏಪ್ರಿಲ್ನಿಂದ ಶುರುವಾಗುವ ಹಣಕಾಸು ವರ್ಷಕ್ಕೆ ಬಜೆಟ್ ಅಂಶಗಳನ್ನು ಅಳವಡಿಸಲು ಸಾಕಷ್ಟು ಸಮಯಾವಕಾಶ ಸಿಗುತ್ತದೆ.
ಈ ಬಾರಿಯದ್ದು ಮಧ್ಯಂತರ ಬಜೆಟ್ ಆದರೂ ಫೆಬ್ರುವರಿ 1ಕ್ಕೆಯೇ ಇರುತ್ತದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರುವರಿ 1ರಂದು ಬೆಳಗ್ಗೆ 11ಗಂಟೆಗೆ ಜಂಟಿ ಸದನದಲ್ಲಿ ಬಜೆಟ್ ಮಂಡಿಸುತ್ತಾರೆ. ಸಾಮಾನ್ಯವಾಗಿ ಬಜೆಟ್ ಭಾಷಣ ಎರಡೂವರೆಗೆ ಗಂಟೆ ಇರುತ್ತದೆ.