ಮಂಗಳೂರು: ನಗರದಾದ್ಯಂತ ಮಾದಕ ವಸ್ತು ಎಂಡಿಎಂಎ ಮಾರಾಟ ಮಾಡುತ್ತಿದ್ದ ಇಬ್ಬರು ಕುಖ್ಯಾತ ಡ್ರಗ್ ಪೆಡ್ಲರ್ ಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಸುರತ್ಕಲ್ ತಡಂಬೈಲ್ ಪರಿಸರದ ಬೀಚ್ ರಸ್ತೆಯಲ್ಲಿ KA- 25-Z-2488 ನಂಬರಿನ ಬಿಳಿ ಬಣ್ಣದ ಕಾರಿನಲ್ಲಿ ಇಬ್ಬರು ಅಕ್ರಮವಾಗಿ MDMA ಮಾದಕ ವಸ್ತುವನ್ನು ವಶದಲ್ಲಿರಿಸಿಕೊಂಡು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಘಟಕದ ಎಸಿಪಿ ಪಿ ಎ ಹೆಗಡೆ ಅವರ ನೇತೃತ್ವದ ಸಿಸಿಬಿ ಪೊಲೀಸರು ದಾಳಿ ನಡೆಸಿ ಎಂಬ ನಿಷೇದಿತ ಮಾದಕ ವಸ್ತುವನ್ನು ಹೊಂದಿದ್ದ ಕಾಟಿಪಳ್ಳ ನಿವಾಸಿ ಶಾಕಿಬ್ ಯಾನೆ ಅಬ್ಬು, ಚೊಕ್ಕಬೆಟ್ಟು ನಿವಾಸಿ ನಿಸಾರ್ ಹುಸೈನ್ ಯಾನೆ ನಿಚ್ಚು ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆರೋಪಿಗಳ ವಶದಿಂದ ಒಟ್ಟು 52 ಗ್ರಾಂ ತೂಕದ ರೂ. 2,60,000/- ಮೌಲ್ಯದ ಎಂಡಿಎಂಎ ಮಾದಕ ವಸ್ತು, ವೋಕ್ಸ್ ವ್ಯಾಗನ್ ಕಾರು, ಎರಡು ಮೊಬೈಲ್ ಫೋನುಗಳು, 1,800/- ಕ್ಯಾಶ್ ಮತ್ತು ಡಿಜಿಟಲ್ ತೂಕ ಮಾಪನವನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ ರೂ 7,83,300/-ಎಂದು ಅಂದಾಜಿಸಲಾಗಿದ್ದು, ಆರೋಪಿಗಳ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳ ಪೈಕಿ ಶಾಕೀಬ್ ಯಾನೆ ಶಬ್ಬು ಎಂಬಾತನ ಮೇಲೆ ಕಳ್ಳತನ, ದರೋಡೆ, ಕೊಲೆಯತ್ನ ಸೇರಿದಂತೆ ಈಗಾಗಲೇ ದ.ಕ. ಮತ್ತು ಉಡುಪಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಒಟ್ಟು 13 ಪ್ರಕರಣಗಳು ದಾಖಲುಗೊಂಡಿವೆ. ಈತ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಸಮಯ ಹಾಜರಾಗದೇ ತಲೆಮರೆಸಿಕೊಂಡಿದ್ದು, ಈತನ ವಿರುದ್ಧ ನ್ಯಾಯಾಲಯವು ವಾರೆಂಟ್ ಹೊರಡಿಸಿರುತ್ತದೆ.
ಇನ್ನೋರ್ವ ಆರೋಪಿ ನಿಸಾರ್ ಹುಸೈನ್ ಯಾನೆ ನಿಚ್ಚು ಎಂಬಾತನ ಮೇಲೆ ಮೂರು ದರೋಡೆ ಪ್ರಕರಣ, ಕೊಲೆ ಯತ್ನ, ಕಳವು ಪ್ರಕರಣ ಸೇರಿದಂತೆ ಒಟ್ಟು 9 ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳಲ್ಲಿ ನ್ಯಾಯಾಲಯದಲ್ಲಿ ಜಾಮೀನು ಪಡೆದುಕೊಂಡು ಬಿಡುಗಡೆಗೊಂಡ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು, ಈತನ ವಿರುದ್ಧ ಏಳು ವಾರಂಟ್ ಜ್ಯಾರಿಯಲ್ಲಿದೆ.
ಇಷ್ಟೂ ಸಾಲದೆಂಬಂತೆ, ಇತ್ತೀಚೆಗೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ್ರಿಕೆಟ್ ಪಂದ್ಯಾಟದ ವೇಳೆ ನಡೆದ ಗಲಾಟೆಯಲ್ಲಿ ಯುವಕನೊಬ್ಬನ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಕೂಡಾ ಭಾಗಿಯಾಗಿದ್ದು, ಈ ಪ್ರಕರಣದಲ್ಲಿ ಕೂಡಾ ನಿಸಾರ್ ತಲೆಮರೆಸಿಕೊಂಡಿದ್ದ.
ಈ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಎಸಿಪಿ ಪಿ ಎ ಹೆಗಡೆ, ಪೊಲೀಸ್ ನಿರೀಕ್ಷಕರಾದ ಶ್ಯಾಮ್ ಸುಂದರ್ ಹೆಚ್ ಎಂ, ಪಿಎಸ್ಐ ಗಳಾದ ರಾಜೇಂದ್ರ ಬಿ, ಶರಣಪ್ಪ ಭಂಡಾರಿ, ಸುದೀಪ್ ಎಂ ವಿ, ನರೇಂದ್ರ ಹಾಗೂ ಸಿಸಿಬಿ ಸಿಬ್ಬಂದಿಗಳು ಪಾಲ್ಗೊಂಡಿದ್ದರು.