ಮಂಗಳೂರು: ಬಸ್ಸಿಗೆ ಹತ್ತುವ ಸಂದರ್ಭದಲ್ಲಿ ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದಾಗಿ ಬಸ್ಸಿನಿಂದ ಹೊರಕ್ಕೆ ಎಸೆಯಲ್ಪಟ್ಟ 66 ವರ್ಷದ ವೃದ್ಧ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಮೂಡುಬಿದ್ರೆ ಬಳಿಯ ಮಾರೂರು ಗ್ರಾಮದಲ್ಲಿ ನಡೆದಿದೆ.
ಮಂಗಳವಾರ ಬೆಳಗ್ಗೆ ಮೊಮ್ಮಗ ಕಾಲೇಜು ತೆರಳುತ್ತಿದ್ದಾಗ ಅಜ್ಜಿ ನೀಲಮ್ಮ (66) ಅವರೂ ಆಸ್ಪತ್ರೆಗೆ ತೆರಳುವುದಕ್ಕಾಗಿ ಜೊತೆಗೆ ಬಂದಿದ್ದರು. ಮಾರೂರು ಗ್ರಾಮದ ಕುಂಟೋಡಿ ಎಂಬಲ್ಲಿ ಮೂಡುಬಿದ್ರೆಗೆ ತೆರಳುವ ಖಾಸಗಿ ಬಸ್ಸಿಗೆ ಹತ್ತಿದ್ದಾರೆ. ಆದರೆ, ಮುಂದಿನ ಬಾಗಿಲಿನಿಂದ ನೀಲಮ್ಮ ಬಸ್ ಹತ್ತುತ್ತಿದ್ದಾಗಲೇ ಚಾಲಕನ ಬಸ್ಸನ್ನು ವೇಗವಾಗಿ ಮುಂದಕ್ಕೆ ಚಲಿಸಿದ್ದರಿಂದ ಬಾಗಿಲು ಇಲ್ಲದ ಕಾರಣ ಹೊರಕ್ಕೆ ಬಿದ್ದಾರೆ.
ತಲೆಗೆ ಗಂಭೀರ ಗಾಯಗೊಂಡಿದ್ದ ನೀಲಮ್ಮ ಅವರನ್ನು ಆಸ್ಪತ್ರೆಗೆ ಒಯ್ಯುತ್ತಿದ್ದಾಗಲೇ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಮೂಡುಬಿದ್ರೆ. ಠಾಣೆಯಲ್ಲಿ ದೂರು ದಾಖಲಾಗಿದ್ದು, ನಿರ್ವಾಹಕ ಅಶೋಕ್ ಮತ್ತು ಚಾಲಕ ಪ್ರಸನ್ನ ವಿರುದ್ಧ ಪ್ರಕರಣ ದಾಖಲಾಗಿದೆ, ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದಿದ್ದು ಠಾಣೆಯಲ್ಲಿ ಜಾಮೀನು ಮೇಲೆ ಬಿಡುಗಡೆ ಮಾಡಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಸ್ಥಳೀಯ ಸಾರ್ವಜನಿಕರು ಬಸ್ ಸಿಬಂದಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಬಸ್ಸನ್ನು ಜಪ್ತಿ ಮಾಡಿದ್ದು ಆರ್ ವಶಕ್ಕೆ ನೀಡಿದ್ದಾರೆ.
ಇತ್ತೀಚೆಗಷ್ಟೇ ಮಂಗಳೂರಿನಲ್ಲಿ ಬಸ್ಸಿನ ಮುಂದಿನ ಬಾಗಿಲಲ್ಲಿದ್ದ ಬಸ್ಸಿನ ನಿರ್ವಾಹಕರೊಬ್ಬರು ಕೆಳಕ್ಕೆ ಎಸೆಯಲ್ಪಟ್ಟು ಮೃತಪಟ್ಟ ಘಟನೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್ ಎಲ್ಲ ಬಸ್ ಮಾಲಕರನ್ನು ಕರೆದು ಒಪ್ಪಿಗೆ ಡೋರ್ ಅಳವಡಿಸುವುದಲ್ಲದೆ, ಸೂಕ್ತ ಕ್ರಮ ವಹಿಸುವಂತೆ ಸೂಚನೆ ನೀಡಿದರು.