ನವದೆಹಲಿ: ಎರಡು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದಾರೆ ಬಾಲಿವುಡ್ ಬ್ಯೂಟಿ ಜಯಪ್ರದಾ. ಎರಡೂ ಪ್ರಕರಣಗಳಲ್ಲಿ ಮಧ್ಯಪ್ರದೇಶ ಕೋರ್ಟ್ ಜಯಪ್ರದಾ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು. ಇದರೊಂದಿಗೆ ಜಯಪ್ರದಾ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ನ್ಯಾಯಾಲಯ ಆದೇಶಿಸಿದೆ. ಆದರೆ ಸದ್ಯ ಯಾರ ಕೈಗೂ ಸಿಗದೇ ನಟಿ ತಲೆ ಮರೆಸಿಕೊಂಡಿದ್ದಾರೆ. ಇದಕ್ಕಾಗಿ ನಟಿಯನ್ನು ಪೊಲೀಸರು ಹುಡುಕುತ್ತಿದ್ದಾರೆ. ಶಹಜಾದ್‌ನಗರದಲ್ಲಿರುವ ಜಯಪ್ರದಾ ಅವರ ನೀಲವೇಣಿ ಕೃಷ್ಣ ಸ್ಕೂಲ್ ಆಫ್ ನರ್ಸಿಂಗ್‌ನ ಮೇಲೂ ತಂಡ ದಾಳಿ ನಡೆಸಿದೆ. ಆದರೆ ನಟಿ ಅಲ್ಲಿ ಇರಲಿಲ್ಲ. ಇದೀಗ ತಂಡ ದೆಹಲಿ ಮತ್ತು ಮುಂಬೈನಲ್ಲಿ ಹುಡುಕಾಟ ನಡೆಸುತ್ತಿದೆ. ಕೋರ್ಟ್ ಆದೇಶದ ಅನ್ವಯ ಜನವರಿ 10ರೊಳಗೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿದೆ.
ಅಂದಹಾಗೆ ಈ ಎರಡೂ ಪ್ರಕರಣಗಳು 2019ರ ಲೋಕಸಭೆ ಚುನಾವಣೆಗೆ ಸಂಬಂಧಿಸಿವೆ. ಆಗ ಜಯಪ್ರದಾ ಅವರು ಬಿಜೆಪಿ ಟಿಕೆಟ್‌ನಲ್ಲಿ ರಾಂಪುರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಇವರ ವಿರುದ್ಧ ಸ್ವರ್ ಪೊಲೀಸ್ ಠಾಣೆಯಲ್ಲಿ ಪ್ರಕರಣವಿದೆ. ಇದರಲ್ಲಿ ನೂರಪುರ ಗ್ರಾಮದಲ್ಲಿ ಅ.19ರಂದು ನೀತಿ ಸಂಹಿತೆ ಇದ್ದರೂ ರಸ್ತೆ ಉದ್ಘಾಟನೆ ಮಾಡಿದ ಆರೋಪವಿದೆ. ಎರಡನೇ ಪ್ರಕರಣವು ಕೆಮ್ರಿ ಪೊಲೀಸ್ ಠಾಣೆಯದ್ದಾಗಿದ್ದು, ಪಿಪ್ಲಿಯಾ ಮಿಶ್ರಾ ಗ್ರಾಮದಲ್ಲಿ ಆಯೋಜಿಸಲಾದ ಸಾರ್ವಜನಿಕ ಸಭೆಯಲ್ಲಿ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಆರೋಪ ನಟಿಯ ಮೇಲಿದೆ