ಪಲ್ಲೆಕೆಲೆ: ಮತ್ತೆ ಮಳೆ ಬಾಧಿತ ಪಂದ್ಯದಲ್ಲಿ ನೇಪಾಳವನ್ನು ಡಕ್ ವರ್ತ್ ಲೂಯಿಸ್ ನಿಯದಡಿಯಲ್ಲಿ 10 ವಿಕೆಟ್ ಗಳಿಂದ ಸೋಲಿಸಿದ ರೋಹಿತ್ ಶರ್ಮಾ ಪಡೆ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ 4 ಹಂತಕ್ಕೇರಿದೆ.
ಪಾಕಿಸ್ಥಾನ ಎದುರಿನ ಭಾರತದ ಮೊದಲ ಪಂದ್ಯ ಮಳೆಯಿಂದಾಗಿ ರದ್ದುಗೊಂಡಿದ್ದ ಕಾರಣ ಎರಡೂ ತಂಡಗಳಿಗೂ ಅಂಕಗಳನ್ನು ಸಮಾನವಾಗಿ ಹಂಚಲಾಗಿತ್ತು.
ಇದೀಗ ಡಕ್ ವರ್ತ್ ಲೂಯಿಸ್ ನಿಯಮದ ಮೂಲಕ ನೇಪಾಳವನ್ನು ಮಣಿಸಿ ಟೀಂ ಇಂಡಿಯಾ ಈ ಸರಣಿಯ ಮುಂದಿನ ಹಂತಕ್ಕೇರಿದ ಸಾಧನೆ ಮಾಡಿದೆ. ಪಾಕ್ ಈಗಾಗಲೇ ಸೂಪರ್ 4 ಸುತ್ತನ್ನು ಪ್ರವೇಶಿಸಿದೆ.
ಮೊದಲು ಬ್ಯಾಟಿಂಗ್ ಮಾಡಿದ ನೇಪಾಳ ತಂಡ 48.2 ಓವರ್ ಗಳಲ್ಲಿ 230 ರನ್ ಗಳಿಗೆ ಆಲೌಟಾಯಿತು. ಆದರೆ ಭಾರತದ ಚೇಸಿಂಗ್ ವೇಳೆ ವರುಣ ಎಂಟ್ರಿ ಕೊಟ್ಟ ಕಾರಣ ಈ ಗುರಿಯನ್ನು ಪರಿಷ್ಕರಿಸಿ ಭಾರತದ ಗೆಲುವಿಗೆ 23 ಓವರ್ ಗಳಲ್ಲಿ 145 ರನ್ ಗಳ ಗುರಿಯನ್ನು ನಿಗದಿಪಡಿಸಲಾಗಿತ್ತು.
ಆರಂಭಿಕರಾದ ಕಪ್ತಾನ ರೋಹಿತ್ ಶರ್ಮಾ (74) ಮತ್ತು ಶುಭಮನ್ ಗಿಲ್ (67) ಅವರ ಅರ್ಧ ಶತಕಗಳ ನೆರವಿನಿಂದ ಟೀಂ ಇಂಡಿಯಾ ಈ ಗುರಿಯನ್ನು 20.1 ಓವರ್ ಗಳಲ್ಲಿ ತಲುಪಿ ಜಯಶಾಲಿಯಾಯ್ತು.
ಈ ಮೊದಲು ಓಪನರ್ ಆಸಿಫ್ ಶೇಖ್ ಬಾರಿಸಿದ 58 ರನ್ ಗಳ ನೆರವಿನಿಂದ ಮತ್ತು ಸೋಂಪಾಲ್ ಕಮಿ (48) ಸೊಗಸಾದ ಆಟದ ನೆರವಿನಿಂದ ನೇಪಾಳ 230 ರನ್ ಗಳನ್ನು ಕಲೆಹಾಕಿತ್ತು.
ಭಾರತದ ಪರ ಮಹಮ್ಮದ್ ಸಿರಾಜ್ ಮತ್ತುಹಾರ್ದಿಕ್ ಪಾಂಡ್ಯ ತಲಾ 3 ವಿಕೆಟ್ ಗಳನ್ನು ಪಡೆದು ಮಿಂಚಿದರು.