ಲಂಡನ್: ಕೇಂಬ್ರಿಡ್ಜ್ ವಿಶ್ವ ವಿದ್ಯಾಲಯದ ಜೀಸಸ್ ಕಾಲೇಜಿನಲ್ಲಿ ನಡೆದ ‘ರಾಮಕಥಾ’ ಕಾರ್ಯಕ್ರಮಕ್ಕೆ ಬ್ರಿಟನ್ ಪ್ರಧಾನಿ ರಿಷಿ ಸುನಾಕ್ ಭೇಟಿ ನೀಡಿದರು.
ಈ ವೇಳೆ ಮಾತನಾಡಿದ ಅವರು, ‘ನಾನು ಇಂದು ಬ್ರಿಟನ್ ಪ್ರಧಾನಿಯಾಗಿ ಬಂದಿಲ್ಲ ಓರ್ವ ಹಿಂದೂವಾಗಿ ಬಂದಿದ್ದೇನೆ..’ ಎಂದು ಹೇಳುವ ಮೂಲಕ ಜಗತ್ತನ್ನೇ ಅಚ್ಚರಿಯಲ್ಲಿ ಕೆಡವಿದ್ದಾರೆ.
ಭಾರತದ 77ನೇ ಸ್ವಾತಂತ್ರ್ಯ ದಿನಾಚರಣೆ ದಿನದಂದೇ ಇಲ್ಲಿ ಮೊರಾರಿ ಬಾಪು ಅವರ ‘ರಾಮಕಥಾ’ ಕಾರ್ಯಕ್ರಮ ಆಯೋಜನೆಯಾಗಿದ್ದು, ಇನ್ನೊಂದು ವಿಶೇಷವಾಗಿತ್ತು.
‘ನನ್ನ ನಂಬಿಕೆ ವೈಯಕ್ತಿಕವಾದದ್ದು, ಪ್ರಧಾನಿಯಾಗಿರುವುದು ದೊಡ್ಡ ಗೌರವವಾದರೂ ಈ ಹುದ್ದೆಯನ್ನು ನಿಭಾಯಿಸುವುದು ಅಷ್ಟು ಸುಲಭವಲ್ಲ. ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು, ಕಠಿಣ ಆಯ್ಕೆಗಳನ್ನು ಮಾಡಬೇಕು, ಜನರಲ್ಲಿ ಆತ್ಮವಿಶ್ವಾಸವನ್ನು ತುಂಬಬೇಕು’ ಎಂದು ಸುನಾಕ್ ಈ ಸಂದರ್ಭದಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
‘ನನ್ನ ಧರ್ಮವು ನನಗೆ ಈ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಯನ್ನು ನೀಡುತ್ತದೆ, ಯಾವುದೇ ಕೆಲಸವನ್ನು ಮಾಡುವ ಮೊದಲು ಸಮಸ್ಯೆಗಳನ್ನು ಆಲಿಸಿ, ಸಮಾಧಾನದಿಂದ ನಿರ್ಧಾರ ತೆಗೆದುಕೊಳ್ಳುವಂತೆ ನನ್ನ ಧರ್ಮವು ಹೇಳುತ್ತದೆ.’ ಎಂದು ಬ್ರಿಟನ್ ಪ್ರಧಾನಿ ಹಿಂದೂ ಧರ್ಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
‘ಮೊರಾರಿ ಬಾಪು ಅವರ ಪೀಠದ ಹಿಂದೆ ಹನುಮಂತನ ವಿಗ್ರಹವನ್ನು ಹೇಗೆ ಇರಿಸಲಾಗಿದೆಯೋ ಅದೇ ರೀತಿ ಗಣೇಶನ ವಿಗ್ರಹವನ್ನು ನನ್ನ ಕಚೇರಿಯ ಮೇಜಿನ ಮೇಲೆ ಇರಿಸಲಾಗಿದೆ..’ ಎಂದು ಬ್ರಿಟನ್ ಪ್ರಧಾನಿ ರಿಷಿ ಹೇಳಿದ್ದಾರೆ.
‘2020ರಲ್ಲಿ ನಾನು ಬ್ರಿಟಿಷ್ ಚಾನ್ಸಲರ್ ಆಗಿದ್ದಾಗ ದೀಪಾವಳಿಯ ದಿನದಂದು ಅಧಿಕೃತ ನಿವಾಸವಾದ 11 ಡೌನಿಂಗ್ ಸ್ಟ್ರೀಟ್‌ನಲ್ಲಿ ಮೊದಲ ಬಾರಿಗೆ ದೀಪವನ್ನು ಬೆಳಗಿಸಿದ್ದೆ. ಪ್ರತಿಯೊಂದು ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸುತ್ತೇನೆ’ ಬ್ರಿಟನ್ ಪ್ರಧಾನಿ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.