ಬೆಂಗಳೂರು: ಬೆಂಗಳೂರಿನಲ್ಲಿ ಮೊದಲ ಬಾರಿಗೆ ಆಯೋಜನೆಗೊಂಡ ಕಂಬಳಕ್ಕೆ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಆಗಮಿಸುವುದಿಲ್ಲ ಎಂದು ಪುತ್ತೂರು ಕಾಂಗ್ರೆಸ್ ಶಾಸಕ ಮತ್ತು ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷ ಅಶೋಕ್ ರೈ ಹೇಳಿದರು.
ಈ ಕಂಬಳಕ್ಕೆ ಬೇರೆ ಬೇರೆ ಸಂಘಟನೆಯವರು ಬಂದು ಅನೇಕ ಮನವಿ ಮಾಡುತ್ತಾರೆ. ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಬಂದು ವೇದಿಕೆಗೆ ಅವರ ಹೆಸರನ್ನು ಇಡಲು ಹೇಳುತ್ತಾರೆ. ಸಿದ್ದಿ ಜನಾಂಗದವರು ಬಂದು ಅವರನ್ನು ಆಹ್ವಾನಿಸುವಂತೆ ಕೇಳಿದ್ದರು. ಆದರೆ ಬ್ರಿಜ್ ಭೂಷಣ್ ಶರಣ್ ಸಿಂಗ್ ಮೊನ್ನೆಯೇ ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದು ತಿಳಿಸಿದ್ದಾರೆ ಎಂದು ಹೇಳಿದರು. ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರಿದೆ. ಈಗ ನಾವು ಆಹ್ವಾನ ಪತ್ರಿಕೆಯನ್ನು ಬದಲಾಯಿಸುತ್ತೇವೆ ಎಂದು ಹೇಳಿದರು.
ಅರಮನೆ ಮೈದಾನದಲ್ಲಿ ನವೆಂಬರ್ 25 ಮತ್ತು 26ರಂದು ಕಂಬಳ ಆಯೋಜನೆಗೊಂಡಿದೆ. ಕುಸ್ತಿಪಟುಗಳಿಗೆ (Wrestlers) ನಡೆಯಲಿರುವ ಸನ್ಮಾನ ಕಾರ್ಯಕ್ರಮಕ್ಕೆ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಿತ್ತು.
ಮಹಿಳಾ ಕುಸ್ತಿ ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪವನ್ನು ಬ್ರಿಜ್ ಭೂಷಣ್ ಶರಣ್ ಸಿಂಗ್ ಎದುರಿಸುತ್ತಿದ್ದು, ದೆಹಲಿಯಲ್ಲಿ ನಡೆಸಿದ ಪ್ರತಿಭಟನೆ ದೇಶದಾದ್ಯಂತ ಸದ್ದು ಮಾಡಿತ್ತು.
ಈ ಪ್ರತಿಭಟನೆಯ ಸಮಯದಲ್ಲಿ ಕಾಂಗ್ರೆಸ್ ಕ್ರೀಡಾಪಟುಗಳ ಪರವಾಗಿ ಮಾತನಾಡಿತ್ತು. ಈಗ ಕರ್ನಾಟಕ ಕಾಂಗ್ರೆಸ್ ಸರ್ಕಾರ ಈ ಕಂಬಳಕ್ಕೆ 1 ಕೋಟಿ ರೂ. ಅನುದಾನ ನೀಡುವುದಾಗಿ ಪ್ರಕಟಿಸಿದೆ. ಹೀಗಿರುವಾಗ ಈ ಕಾರ್ಯಕ್ರಮಕ್ಕೆ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಆಹ್ವಾನಿಸಿದ್ದು ಎಷ್ಟು ಸರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಜನರು ಪ್ರಶ್ನಿಸುತ್ತಿದ್ದಾರೆ.