ಉಡುಪಿ: ಈದ್ ಪ್ರಯುಕ್ತ ಖಾಸಗಿ ರೆಸಾರ್ಟ್‌ನಲ್ಲಿ ಆಟವಾಡಲು ಹೋಗಿದ್ದ ನಾಲ್ಕನೇ ತರಗತಿಯ ವಿದ್ಯಾರ್ಥಿ ಈಜುಕೊಳದಲ್ಲಿ ಮುಳುಗಿ ಮೃತಪಟ್ಟ ಘಟನೆ ಕುಂದಾಪುರ ಸಮೀಪ ಶಂಕರನಾರಾಯಣದಲ್ಲಿ ಸಂಭವಿಸಿದೆ.
ಮುಹಮ್ಮದ್ ಅರೀಝ್ (10) ಮೃತಪಟ್ಟ ಬಾಲಕ. ಗುರುವಾರ ಮನೆ ಮಂದಿಯೊಂದಿಗೆ ಹೆಂಗವಳ್ಳಿಯ ರೆಸಾರ್ಟ್ ಗೆ ಹೋಗಿದ್ದು, ಈಜುಕೊಳಕ್ಕೆ ಬಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ.
ಅರೀಝ್ ಸಾವಿಗೆ ರೆಸಾರ್ಟ್ ಅವರ ನಿರ್ಲಕ್ಷ್ಯವೇ ಕಾರಣವೆಂದು ದೂರಿನಲ್ಲಿ ಆರೋಪಿಸಲಾಗಿದೆ. ಲೈಫ್ ಜಾಕೆಟ್, ಲೈಫ್ ಗಾರ್ಡ್ ಇನ್ನಿತರ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ಈ ದುರ್ಘಟನೆ ಸಂಭವಿಸಿದೆ ಎಂದು ದೂರಿನಲ್ಲಿ ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮೃತ ವಿದ್ಯಾರ್ಥಿ ಹೂಡೆಯ ದಾರುಸ್ವಲಾಮ್ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿಯಾಗಿದ್ದ.