ಕನ್ನಡ ಲೇಖಕ ಎಸ್.ಎಲ್. ಭೈರಪ್ಪ ಅವರ ‘ಪರ್ವ’ ಕಾದಂಬರಿಯನ್ನು ಆಧರಿಸಿ ಈಗ ಸಿನಿಮಾ ತಯಾರಾಗುತ್ತಿದೆ. ಬಾಲಿವುಡ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಪರ್ವ’ ಕಾದಂಬರಿಯನ್ನು ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಇಂದು ಬೆಂಗಳೂರಿನಲ್ಲಿ ಈ ಸಿನಿಮಾದ ಟೈಟಲ್ ಲಾಂಚ್ ಮಾಡಲಾಗಿದೆ.
‘ಪರ್ವ’ ಕೃತಿಯನ್ನು ಆಧರಿಸಿ ಪ್ರಕಾಶ್ ಬೆಳವಾಡಿ ಅವರು ಇಂಗ್ಲಿಷ್ ನಾಟಕಕ್ಕೆ ನಿರ್ದೇಶನ ಮಾಡಿದ್ದಾರೆ. ಇದು 8 ಗಂಟೆ ಅವಧಿಯ ದೀರ್ಘ ನಾಟಕ. ಇಂದು ಬೆಂಗಳೂರಿನ ಚೌಡಯ್ಯ ಮೆಮೋರಿಯಲ್ ಹಾಲ್ನಲ್ಲಿ ಈ ನಾಟಕ ಪ್ರದರ್ಶನ ಆಗುತ್ತಿದೆ. ಅದಕ್ಕೂ ಮುನ್ನ ವಿವೇಕ್ ಅಗ್ನಿಹೋತ್ರಿ ಅವರು ಸುದ್ದಿಗೋಷ್ಠಿ ನಡೆಸಿ ‘ಪರ್ವ’ ಸಿನಿಮಾ ಬಗ್ಗೆ ಮಾಹಿತಿ ಕೊಟ್ಟಿದ್ದಾರೆ.
ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನು ನೋಡಿ ಪ್ರಕಾಶ್ ಬೆಳವಾಡಿ ಅವರು ಪರ್ವ ಸಿನಿಮಾ ಮಾಡುವಂತೆ ಒಂದು ವರ್ಷದ ಹಿಂದೆಯೇ ನನಗೆ ಹೇಳಿದರು. ಮಹಾಭಾರತದಲ್ಲಿ ನಾವು ಕೇಳದೆ ಇರುವಂತಹ ವಿಷಯಗಳನ್ನ ಬರೆದಿದ್ದಾರೆ. ಇದಕ್ಕಾಗಿ ಸಾಕಷ್ಟು ವರ್ಷಗಳ ಕಾಲ ಶ್ರಮಿಸಿದ್ದಾರೆ. ಈ ಸಿನಿಮಾ ಮೂರು ಪಾರ್ಟ್ಗಳಲ್ಲಿ ಬರುತ್ತದೆ’ ಎಂದು ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ.ಸಾಯುವುದಕ್ಕೂ ಮೊದಲು ನಾನು ‘ಪರ್ವ’ ಚಿತ್ರ ನಿರ್ದೇಶನ ಮಾಡಬೇಕು. ಮಹಾಭಾರತದ ಎಂದರೆ ಭಾರತದ ಸಾಕ್ಷಿಪ್ರಜ್ಞೆ. ಸಾಕಷ್ಟು ಅಧ್ಯಯನ ನಡೆಸಿ ಭೈರಪ್ಪ ಅವರು ಈ ಪುಸ್ತಕ ಬರೆದಿದ್ದಾರೆ. ಈ ಚಿತ್ರವನ್ನು ನಿರ್ದೇಶಿಸುವ ಚಾನ್ಸ್ ಸಿಕ್ಕಿದ್ದಕ್ಕೆ ಹಾಗೂ ನನ್ನ ಮೇಲೆ ಭೈರಪ್ಪ ಅವರು ಭರವಸೆ ಇಟ್ಟಿದ್ದಕ್ಕೆ ಕೃಷ್ಣ ಪರಮಾತ್ಮನಿಗೆ ಧನ್ಯವಾದ ಹೇಳುತ್ತೇನೆ’ ವಿವೇಕ್ ಅಗ್ನಿಹೋತ್ರಿ ಹೇಳಿದ್ದಾರೆ.