ನಾವು ಭೂತ ಪೂಜೆ ಮಾಡುವವರು. ಅಲ್ಲಿಗೆ ಹೋಗ್ತೀವಿ
ಚಿಕ್ಕಮಗಳೂರು: ರಾಮಮಂದಿರಕ್ಕೆ ಹೋಗಲ್ಲ. ನಾವು ಅಣ್ಣಮ್ಮ, ಮಾರಮ್ಮ, ಭೂತ ಪೂಜೆ ಮಾಡುವವರು. ಅಲ್ಲಿಗೆ ಹೋಗ್ತೀವಿ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಹೇಳಿದರು.
ಅಯೋಧ್ಯೆಯಲ್ಲಿ ಜಗದ್ಗುರು ಇಲ್ಲ. ಅಲ್ಲಿರೋದು ವಿಶ್ವಗುರು. ವಿಶ್ವಗುರು ಏನೆಂದು ದೇಶಕ್ಕೆ ಗೊತ್ತು. ನಾವು ಚಿಕ್ಕವರಿದ್ದಾಗ ಶಂಕರಾಚಾರ್ಯರು ಹಿಂದೂ ಧರ್ಮದ ಮುಖ್ಯಸ್ಥರು ಎಂದು ಹೇಳಿಕೊಟ್ಟಿದ್ದಾರೆ. ಆದರೆ, ಶಂಕರರು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಮಾಡಿದ್ದರೆ ಅದು ಧಾರ್ಮಿಕ ಕಾರ್ಯಕ್ರಮ ಆಗುತ್ತಿತ್ತು. ಆಗ ಯಾವ ಆಮಂತ್ರಣ ಏನೂ ಬೇಕಿರಲಿಲ್ಲ, ನಾವು ಹೋಗ್ತಿದ್ವಿ. ಆದರೆ ಅಲ್ಲಿ ಜಗದ್ಗುರು ಬದಲು ವಿಶ್ವಗುರು ಇದ್ದಾರೆ. ಅಂದರೆ ಅದು ಬಿಜೆಪಿ ಕಾರ್ಯಕ್ರಮ ಎಂದು ವಾಗ್ದಾಳಿ ನಡೆಸಿದರು.
ದೇಶದ ನಾಲ್ಕು ಶಂಕರರಲ್ಲಿ ಇಬ್ಬರು ವಿರುದ್ಧ ಇದ್ದಾರೆ. ಮತ್ತಿಬ್ಬರು ತಟಸ್ಥರಿದ್ದೇವೆ ಎಂದಿದ್ದಾರೆ. ಆಮಂತ್ರಣ ಕೊಡೋಕೆ ಇವರು ಯಾರು? ರಾಮ ಫೋನ್ ಮಾಡಿ ಹೇಳಿದ್ನ ಕೊಡಿ ಅಂತಾ? ಶಂಕರಾಚಾರ್ಯರು ಮಾಡಿದ್ರೆ ನಮಗೆ ಆಮಂತ್ರಣ ಬೇಡವಾಗಿತ್ತು. ದೇವಸ್ಥಾನಕ್ಕೆ ಹೋಗಬೇಕು. ಇಂತಹದ್ದೇ ದೇವರು ಅಂತಿಲ್ಲ. ದೇಶದಲ್ಲಿ 33 ಕೋಟಿ ದೇವರಿವೆ. ಎಲ್ಲಾದ್ರು ಹೋಗ್ತೀವಿ. ನಾವು ಮಾರಮ್ಮ, ಅಣ್ಣಮ್ಮ, ಭೂತ ಪೂಜೆ ಮಾಡೋರು. ಭೂತದ ಬಳಿ ಹೋಗ್ತೀವಿ ಎಂದು ತಿಳಿಸಿದರು.
ನಿಗಮ ಮಂಡಳಿ ನೇಮಕದ ಬಗ್ಗೆ ಪ್ರತಿಕ್ರಿಯಿಸಿ, ಅದನ್ನ ನೀವು ಸರ್ಕಾರದವರನ್ನೇ ಕೇಳಬೇಕು. ನಾನು ಸರ್ಕಾರದಲ್ಲಿ ಇಲ್ಲ. ನಾನು ಹೊರಗಡೆ ಇದ್ದೀನಿ. ಯಾವ ಮಾನದಂಡದಲ್ಲಿ ನಿಗಮ ಮಂಡಳಿ ಮಾಡ್ತಿದ್ದಾರೆ ಅವರನ್ನೇ ಕೇಳಬೇಕು. ಈ ಬಗ್ಗೆ ನನಗೆ ಗೊತ್ತಿಲ್ಲ. ಮಾಡ್ತಿರೋದು, ನಿಂತಿರೋದು, ಮುಂದಾಗೋದು ಗೊತ್ತಿಲ್ಲ ಎಂದು ಸ್ವಪಕ್ಷೀಯರ ವಿರುದ್ಧವೇ ಬೇಸರ ಹೊರಹಾಕಿದರು.
ನನಗೆ ಕಾಂಗ್ರೆಸ್ ಮೇಲೆ ಅಸಮಾಧಾನ ಇಲ್ಲ. ಯಾಕಂದ್ರೆ ನಾನು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಕಾಂಗ್ರೆಸ್ಸಿನಲ್ಲಿ ಇದ್ದೀನಿ. ನಾನೇಕೆ ಅಸಮಾಧಾನಗೊಳ್ಳಲಿ? ಅಧಿಕಾರಕ್ಕಾಗಿ ನಾನು ಬೇರೆ ಬೇರೆ ಪಕ್ಷಗಳನ್ನ ಬದಲಾವಣೆ ಮಾಡಿದವನಲ್ಲ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯಗೆ ಪರೋಕ್ಷವಾಗಿ ಟಾಂಗ್ ಕೊಟ್ಟರು.
ನಾನು ಅಧಿಕಾರಕ್ಕಾಗಿ ಬಂದ ವಲಸೆ ಪ್ರಾಣಿ ಅಲ್ಲ. ಆದರೆ ಕೆಲವರು ಕಾಂಗ್ರೆಸ್ಸೇ ನಮ್ದು ಅಂತಿದ್ದಾರೆ. ಅದಕ್ಕೆ ನಮ್ಮ ಅಸಮಾಧಾನ ಅಷ್ಟೆ. ಸಮಾಧಾನ-ಅಸಮಾಧಾನ ತಿಳಿದುಕೊಂಡವರಿಗೆ ಗೊತ್ತಾಗುತ್ತೆ. ಸಿದ್ದರಾಮಯ್ಯ ಈ ರಾಜ್ಯದ ಮುಖ್ಯಮಂತ್ರಿ. ಅವರ ಮೇಲೆ ಏಕೆ ಸಿಟ್ಟಾಗೋಣ ಎಂದು ಕೇಳಿದರು.