ವಿಜಯನಗರ: ಬೈಂದೂರು ಬಿಜೆಪಿ ಟಿಕೆಟ್ ಆಕಾಂಕ್ಷಿ ಗೋವಿಂದ ಪೂಜಾರಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ಆಮಿಷವೊಡ್ಡಿ 7 ಕೋಟಿ ರುಪಾಯಿ ವಂಚಿಸಿರುವ ಆರೋಪದ ಮೇರೆಗೆ ವಾಗ್ಮಿ ಚೈತ್ರಾ ಕುಂದಾಪುರ ಅವರನ್ನು ಮಂಗಳವಾರ (ಸೆ.12) ರಾತ್ರಿ ಬೆಂಗಳೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಚೈತ್ರಾ ಜೊತೆಗೆ ಪ್ರಸಾದ್, ಗಗನ್ ಕಡೂರು, ಪ್ರಜ್ವಲ್ ಶೆಟ್ಟಿ ಆರ್ ಎಸ್ ಧನರಾಜ್, ರಮೇಶ್, ಶ್ರೀಕಾಂತ್ ಎಂಬವರನ್ನೂ ಕೂಡಾ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಇದೀಗ ಈ ಪ್ರಕರಣದಲ್ಲಿ ಉತ್ತರ ಕರ್ನಾಟಕ ಭಾಗದ ಸ್ವಾಮೀಜಿಯೊಬ್ಬರ ಹೆಸರು ಕೇಳಿಬಂದಿದೆ. ಹಡಗಲಿ ತಾಲೂಕಿನ ಹಿರೇಹಡಗಲಿ ಹಾಲಶ್ರೀ ಮಠದ ಅಭಿನವ ಹಾಲಶ್ರೀ ಎಂಬವರೇ ಈ ಸ್ವಾಮೀಜಿಯಾಗಿದ್ದು, ಇದೀಗ ಚೈತ್ರಾ ಬಂಧನವಾಗುತ್ತಿದ್ದಂತೆ ಹಾಲಶ್ರೀ ಯಾರ ಕೈಗೂ ಸಿಗದೇ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ.
ಬಿಜೆಪಿ ವಿಧಾನ ಸಭಾ ಟಿಕೆಟ್ ಹೆಸರಿನಲ್ಲಿ ಉದ್ಯಮಿ ಗೋವಿಂದ ಬಾಬು ಕಡೆಯಿಂದ ಕೋಟ್ಯಂತರ ರೂಪಾಯಿ ಪಡೆದುಕೊಂಡಿರುವ ಪ್ರಕರಣದಲ್ಲಿಮೂವರು ಆರೋಪಿಗಳ ಬಂಧನವಾಗುತ್ತಿದ್ದಂತೆಯೇ, ಈ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಹಿರೇಹಡಗಲಿ ಹಾಲಶ್ರೀ ಮಠದ ಅಭಿನವ ಹಾಲಶ್ರೀ ನಾಪತ್ತೆಯಾಗಿದ್ದಾರೆ.
ಇದೀಗ, ಶ್ರೀಗಳು ತಮ್ಮ ಮಠಕ್ಕೂ ಬಾರದೇ, ಯಾರ ಸಂಪರ್ಕಕ್ಕೂ ಸಿಗದೆ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಇನ್ನು ಬೆಳಗಿನಿಂದ ಹಾಲಶ್ರೀಗಳ ಮೊಬೈಲ್ ಸಹ ಸ್ವಿಚ್ ಆಫ್ ಆಗಿದ್ದು, ಅವರೀಗ ಎಲ್ಲಿದ್ದಾರೆಂಬ ಮಾಹಿತಿ ಸದ್ಯಕ್ಕೆ ಲಭ್ಯವಾಗಿಲ್ಲ.