Site icon newsroomkannada.com

ಇನ್ನು ಇದಕ್ಕೆಲ್ಲಾ ಬರ್ತ್ ಸರ್ಟಿಫಿಕೇಟ್ ದಾಖಲೆಯೊಂದೇ ಸಾಕು..!- ಅ.01ರಿಂದ್ಲೇ ಹೊಸ ಕಾನೂನು ಜಾರಿ

(Representative Image Used)

ನವದೆಹಲಿ: ಹಲವು ಸೇವೆಗಳಿಗೆ ಜನನ ಪ್ರಮಾಣಪತ್ರವನ್ನು ಒಂದೇ ದಾಖಲೆಯಾಗಿ ಮಾಡುವ ತಿದ್ದುಪಡಿ ಕಾನೂನು ಅಕ್ಟೋಬರ್ 01ರಿಂದ ಜಾರಿಗೆ ಬರಲಿದೆ.

ಇತ್ತಿಚಿಗೆ ಸಂಸತ್‌ನಲ್ಲಿ ಅನುಮೋದನೆಗೊಂಡು, ರಾಷ್ಟ್ರಪತಿ ದ್ರೌಪದಿ ಮುರ್ಮು (Droupadi Murmu) ಅಂಕಿತ ಹಾಕಿದ್ದ ‘ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾನೂನು’ ಅಕ್ಟೋಬರ್ 01 ರಿಂದ ಜಾರಿಗೆ ಬರಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕೇಂದ್ರ ಗೃಹ ಇಲಾಖೆಯಿಂದ ಹೊರಡಿಸಿದ ಪ್ರಕಟಣೆಯಲ್ಲಿ ರಿಜಿಸ್ಟ್ರಾರ್ ಮತ್ತು ಜನಗಣತಿ ಆಯುಕ್ತ ಮೃತ್ಯುಂಜಯ್ ಕುಮಾರ್ ನಾರಾಯಣ್ ಈ ಮಾಹಿತಿ ನೀಡಿದ್ದಾರೆ.

ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶ, ಚಾಲನಾ ಪರವಾನಗಿ ನೀಡಿಕೆ, ಆಧಾರ್ ಕಾರ್ಡ್ ಅಥವಾ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸುವುದು ಮತ್ತು ವಿವಾಹ ನೋಂದಣಿ, ಸರಕಾರಿ ಕೆಲಸಕ್ಕೆ ನೇಮಕಾತಿಯಂತಹ ಹಲವಾರು ಕೆಲಸಗಳು ಮತ್ತು ಸೇವೆಗಳಿಗೆ ಜನನ ಪ್ರಮಾಣಪತ್ರವನ್ನು ಒಂದೇ ದಾಖಲೆಯಾಗಿ ಬಳಸಲು ಹೊಸ ತಿದ್ದುಪಡಿ ಮಾಡಿದ ಕಾನೂನು ಅನುಕೂಲ ಮಾಡುತ್ತದೆ.

ಕಳೆದ ಮಾನ್ಸೂನ್ ಅಧಿವೇಶನದಲ್ಲಿ ‘ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾಯಿದೆ, 2023’ನ್ನು ಸಂಸತ್ತಿನಲ್ಲಿ ಅಂಗೀಕರಿಸಲಾಗಿತ್ತು.

ಇದೀಗ ಈ ಕಾಯ್ದೆಗೆ ಆ.11ರಂದು ರಾಷ್ಟ್ರಪತಿಯವರ ಅಂಕಿತ ದೊರೆತಿದ್ದು, “ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಕಾಯಿದೆ, 2023 (2023 ರ 20) ರ ವಿಭಾಗ 1 ರ ಉಪ-ವಿಭಾಗ (2) ರ ಮೂಲಕ ನೀಡಲಾದ ಅಧಿಕಾರಗಳ ಅನುಷ್ಠಾನದಲ್ಲಿ, ಕೇಂದ್ರ ಸರ್ಕಾರವು ಈ ಮೂಲಕ ಅಕ್ಟೋಬರ್ 1, 2023ರ ದಿನಾಂಕವನ್ನು ಸದರಿ ಕಾಯಿದೆಯ ನಿಬಂಧನೆಗಳು ಜಾರಿಗೆ ಬರುವ ದಿನಾಂಕವನ್ನಾಗಿ ನೇಮಿಸುತ್ತದೆ” ಎಂದು ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರಾದ ಮೃತುಂಜಯ್ ಕುಮಾರ್ ನಾರಾಯಣ್ ಹೊರಡಿಸಿರುವ ಅಧಿಸೂಚನೆಯಲ್ಲಿ ನಮೂದಿಸಲಾಗಿದೆ.

ಕಾನೂನು ಶಿಕ್ಷಣ ಸಂಸ್ಥೆಗೆ ಪ್ರವೇಶ, ಡ್ರೈವಿಂಗ್ ಲೈಸೆನ್ಸ್ ನೀಡಿಕೆ, ಮತದಾರರ ಪಟ್ಟಿ ಸಿದ್ಧಪಡಿಸುವುದು, ಆಧಾರ್ ಸಂಖ್ಯೆ, ಮದುವೆ ನೋಂದಣಿ ಅಥವಾ ಸರ್ಕಾರಿ ಉದ್ಯೋಗಕ್ಕೆ ನೇಮಕಾತಿ ಮುಂತಾದ ಹಲವಾರು ಉದ್ದೇಶಗಳಿಗಾಗಿ ಜನನ ಪ್ರಮಾಣ ಪತ್ರವನ್ನು (Birth Certificate) ಮಾತ್ರ ಒಂದೇ ದಾಖಲೆಯಾಗಿ ಬಳಸಲು ಈ ಕಾನೂನು ಅವಕಾಶ ಮಾಡಿಕೊಡುತ್ತದೆ..

ನೋಂದಾಯಿತ ಜನನ ಮತ್ತು ಮರಣಗಳ ರಾಷ್ಟ್ರೀಯ ಮತ್ತು ರಾಜ್ಯಮಟ್ಟದ ದಾಖಲೆಯನ್ನು ರಚಿಸಲು ಕಾನೂನು ಸಹಾಯ ಮಾಡುತ್ತದೆ. ಯಾವುದೇ ವ್ಯಕ್ತಿಗೆ 18 ವರ್ಷ ವಯಸ್ಸು ತುಂಬುತ್ತಲೇ ಮತದಾರರ ಗುರುತಿನ ಚೀಟಿ (ವೋಟರ್ ಐಡಿ) ಮಾಡಿಸಿಕೊಳ್ಳುವಂತೆ ಚುನಾವಣಾ ಆಯೋಗದ ಕಡೆಯಿಂದ ಸೂಚನೆ ಬರಲಿದೆ. ಅದೇ ರೀತಿ ಯಾವುದೇ ವ್ಯಕ್ತಿ ಮೃತಪಟ್ಟಲ್ಲಿ, ಚುನಾವಣಾ ಆಯೋಗವು ತಾನೇ ಆ ವ್ಯಕ್ತಿಯ ಹೆಸರನ್ನು ಮತದಾರ ಪಟ್ಟಿಯಿಂದ ಡಿಲೀಟ್ ಮಾಡಲಿದೆ.

Exit mobile version