ಪಾಟ್ನಾ: ಬಿಹಾರದಲ್ಲಿ ಗಂಗಾ ನದಿಯ ಮೇಲೆ ಖಗಾರಿಯಾವನ್ನು ಸಂಪರ್ಕಿಸುವ ಭಾಗಲ್ಪುರ ಜಿಲ್ಲೆಯ ಸುಲ್ತಂಗಂಜ್ ನಡುವೆ ನಿರ್ಮಾಣ ಹಂತದಲ್ಲಿದ್ದ ನಾಲ್ಕು ಪಥದ ಸೇತುವೆ ಭಾನುವಾರ ಕುಸಿದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೂಲಗಳ ಪ್ರಕಾರ, ಸೇತುವೆಯ ಒಂದು ಭಾಗವು ಕುಸಿದು ಬಿದ್ದಾಗ ಅನೇಕ ಕಾರ್ಮಿಕರು ಸೇತುವೆಯ ಮೇಲೆ ಕೆಲಸ ಮಾಡುತ್ತಿದ್ದರು ಮತ್ತು ಅವರಲ್ಲಿ ಹಲವರು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದೆ. ಆದಾಗ್ಯೂ, ಭಾಗಲ್ಪುರದ ಜಿಲ್ಲಾಡಳಿತ ಅಥವಾ ಬಿಹಾರ ಸರ್ಕಾರವು ಇನ್ನೂ ಸಾವುನೋವುಗಳ ಬಗ್ಗೆ ಯಾವುದೇ ಅಂಕಿಅಂಶಗಳನ್ನು ನೀಡಿಲ್ಲ. ನಿರ್ಮಾಣ ಹಂತದಲ್ಲಿರುವ ಸೇತುವೆ ಕುಸಿದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಜಿಲ್ಲಾಡಳಿತ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸುಲ್ತಂಗಂಜ್ ಮತ್ತು ಖಗಾರಿಯಾ ನಡುವಿನ ಸೇತುವೆ ಕಳೆದ ವರ್ಷವೂ ಕುಸಿದಿತ್ತು. ಆಗ ಬೀಸಿದ ಗಾಳಿಗೆ ಸೇತುವೆ ಕುಸಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದರು. ಆ ವೇಳೆ ನಿರ್ಮಾಣ ಕಂಪನಿ ‘ಎಸ್ ಕೆ ಸಿಂಗ್ಲಾ’ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬಿಹಾರ ಸರ್ಕಾರ ಹೇಳಿತ್ತು. ತನಿಖೆಯ ನಂತರ, ಕಂಪನಿಗೆ ಕ್ಲೀನ್ ಚಿಟ್ ನೀಡಲಾಗಿತ್ತು. ಸೇತುವೆಯ ನಿರ್ಮಾಣವು 2014 ರಲ್ಲಿ ಪ್ರಾರಂಭವಾಯಿತು. ಆದರೆ ಈ ನಿರ್ಮಾಣಕ್ಕೆ ನೀಡಲಾಗಿದ್ದ ಆರು ಗಡುವನ್ನು ಕಂಪನಿ ತಪ್ಪಿಸಿತ್ತು. ಏಳನೇ ಗಡುವು ಜೂನ್ 30 ಕ್ಕೆ ನಿಗದಿಪಡಿಸಲಾಗಿತ್ತು. ದುರಾದೃಷ್ಟವಶಾತ್ ಈ ನಡುವೆ ಸೇತುವೆ ಕುಸಿದಿದೆ.