ಬೆಂಗಳೂರು: ಕೊರೋನಾ ಬಂದರೆ ರೋಗಿಗಳು 7 ದಿನ ಕಡ್ಡಾಯವಾಗಿ ಹೋಂ ಐಸೊಲೇಷನ್ ನಲ್ಲಿರಬೇಕು. ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು, ಹಾಗೆಂದು ಜನರು ಆತಂಕಪಡುವ ಅಗತ್ಯವಿಲ್ಲ, ಕಾಳಜಿ ವಹಿಸಿಕೊಳ್ಳಿ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಇಂದು ಬೆಂಗಳೂರಿನಲ್ಲಿ ಕೋವಿಡ್ ಸಂಪುಟ ಉಪಸಮಿತಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕೋವಿಡ್ ಮಾರ್ಗಸೂಚಿಗಳ ಬಗ್ಗೆ ಮಾಹಿತಿ ನೀಡಿದರು. ಕೋವಿಡ್ ಸಂಪುಟ ಉಪಸಮಿತಿ ಸಭೆಯಲ್ಲಿ ತಜ್ಞರೊಂದಿಗೆ ಚರ್ಚೆ ನಡೆಸಿದ ನಂತರ ತಂದಿರುವ ಮಾರ್ಗಸೂಚಿಗಳೇನು ಎಂದು ವಿವರಿಸಿದರು.
ಹೊಸ ವರ್ಷಕ್ಕೆ ಇಲ್ಲ ನಿರ್ಬಂಧ: ಹೊಸ ವರ್ಷ ಆಚರಣೆಗೆ ಯಾವುದೇ ನಿರ್ಬಂಧವಿಲ್ಲ. ಜನರೇ ಜನದಟ್ಟಣಿಯಲ್ಲಿ ಸೇರದಂತೆ ತಮ್ಮನ್ನು ತಾವು ಸಾಧ್ಯವಾದಷ್ಟು ನಿರ್ಬಂಧ ಹೇರಿಕೊಳ್ಳಿ. ಜ್ವರ, ಕೆಮ್ಮು, ನೆಗಡಿ, ಶೀತ, ಗಂಟಲು ನೋವು ಬಂದರೆ ಮನೆಯಲ್ಲಿಯೇ ಉಳಿದುಕೊಳ್ಳಿ. ಇದು ಖಾಸಗಿ ವಲಯಕ್ಕೂ ನಿಯಮ ಅನ್ವಯವಾಗುತ್ತದೆ, ಕಡ್ಡಾಯವಾಗಿ ಉದ್ಯೋಗಿಗಳಿಗೆ ಕೋವಿಡ್ ರಜೆ ನೀಡಬೇಕು ಎಂದರು.
ಶಾಲೆಗೆ ಕಳುಹಿಸಬೇಡಿ: ಕೋವಿಡ್ ಲಕ್ಷಣಗಳು, ಜ್ವರ, ಕೆಮ್ಮು ಮಕ್ಕಳಲ್ಲಿ ಕಂಡುಬಂದರೆ ಶಾಲೆಗೆ ಕಳುಹಿಸದೇ ಇರುವುದು ಉತ್ತಮ, ಮಕ್ಕಳಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ನಿರ್ಬಂಧ ಹಾಕುವುದು ಉತ್ತಮ. ಹೊರಗೆ ಓಡಾಡುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳಿ. ಶುಚಿತ್ವ ಕಾಪಾಡಿ, ಸ್ಯಾನಿಟೈಸರ್ ಬಳಸಿ ಎಂದರು.