ಬೆಂಗಳೂರು: ಕೇಂದ್ರ ಸರ್ಕಾರ ಭಾರತ್ ರೈಸ್ (Bharat rice) ಎಂಬ ಹೊಸ ಬ್ರಾಂಡ್ನ ಅಕ್ಕಿಯನ್ನು ಪ್ರತಿ ಕೆಜಿಗೆ ಕೇವಲ 29 ರೂ.ಗೆ ಬಿಡುಗಡೆಗೊಳಿಸಿದೆ. ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ ಅಕ್ಕಿಯ ದರ 60-70 ರೂ. ಇರುವಾಗ ಭಾರತ್ ರೈಸ್ ಅನ್ನು ಕೇಂದ್ರ ಸರ್ಕಾರ 20 ರೂ. ಕಡಿಮೆ ಬೆಲೆಗೆ ವಿತರಿಸುವ ಮೂಲಕ ಜನ ಸಾಮಾನ್ಯರಿಗೆ ಅನುಕೂಲ ಮಾಡಿಕೊಡಲು ನಿರ್ಧರಿಸಿದೆ. ಇವತ್ತು ಅಕ್ಕಿಯ ತೌಡಿಗೂ ಕೆಜಿಗೆ 40 ರೂ. ಇದೆ. ಬೆಂಗಳೂರಿನ ಮಂಡಿಪೇಟೆಯಲ್ಲಿ ಸೋನಾ ಮಸೂರಿ ಅಕ್ಕಿಯ ದರ ಕೆ.ಜಿಗೆ 65 ರೂ. ಇದೆ. ಹಾಗಾದರೆ ಭಾರತ್ ರೈಸ್ನ ಉದ್ದೇಶವೇನು? ಇದು ಎಲ್ಲಿ ಸಿಗುತ್ತದೆ? ಇದನ್ನು ಪಡೆಯುವುದು ಹೇಗೆ? ಭಾರತದಲ್ಲಿ ಅಕ್ಕಿಯ ದರಗಳು ಏರುತ್ತಿರುವುದೇಕೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳೋಣ.
ಇದಕ್ಕೂ ಮುನ್ನ ಕೇಂದ್ರ ಸರ್ಕಾರ ಕಳೆದ ವರ್ಷ ಬಿಡುಗಡೆಗೊಳಿಸಿದ್ದ ಸಬ್ಸಿಡಿ ದರದ ಗೋಧಿ ಹಿಟ್ಟಿನ ಪ್ಯಾಕೇಟ್ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ನೋಡೋಣ, ನೀವು ಇ-ಕಾಮರ್ಸ್ ವೆಬ್ಸೈಟ್ ಜಿಯೊ ಮಾರ್ಟ್ಗೆ ಲಾಗಿನ್ ಆಗಿ ಭಾರತ್ ಅಟ್ಟಾ ಎಂದು ಸರ್ಚ್ ಮಾಡಿ ನೋಡಿ. ಪ್ರತಿ ಕೆಜಿಗೆ 27.50 ರೂ.ಗೆ ಸಿಗುತ್ತದೆ. 10 ಕೆಜಿಗೆ ಕೇವಲ 275 ರೂ.ಗೆ ನಿಮ್ಮ ಮನೆ ಬಾಗಿಲಿಗೆ ತರಿಸಿಕೊಳ್ಳಬಹುದು. ಆದರೆ ಇತರ ಗೋಧಿ ಹಿಟ್ಟಿನ ದರವನ್ನೂ ಇ-ಕಾಮರ್ಸ್ ವೆಬ್ ಸೈಟ್ನಲ್ಲಿ ನೋಡಿ, 100-120 ರೂ . ಹೆಚ್ಚಿನ ದರವನ್ನು ಕಾಣಬಹುದು. ಹೀಗಾಗಿ ಭಾರತ್ ಬ್ರಾಂಡ್ನ ಗೋಧಿ, ಕಡ್ಲೆ ಬೇಳೆಯ ಬಳಿಕ ಇದೀಗ ಅಕ್ಕಿಯನ್ನೂ ಅಗ್ಗದ ದರದಲ್ಲಿ ನೀಡಲು ಸರ್ಕಾರ ನಿರ್ಧರಿಸಿದೆ.
ಈ ವರ್ಷ ಬರಗಾಲದ ಪರಿಣಾಮ ಬೇಸಗೆಯ ಭತ್ತದ ಬೆಳೆ ಗಣನೀಯವಾಗಿ ಕುಸಿದಿದೆ. ಇದರಿಂದಾಗಿ ಅಕ್ಕಿಯ ದರ ಗಗನಕ್ಕೇರಿದೆ. ಉದಾಹರಣೆಗೆ ರಾಜ್ಯವನ್ನೇ ತೆಗೆದುಕೊಳ್ಳೋಣ. ಬೇಸಗೆಯಲ್ಲಿ ದಾವಣಗೆರೆ, ತುಮಕೂರು ಭಾಗದಿಂದ ಬರಬೇಕಿದ್ದ ಭತ್ತದ ಬೆಳೆ ಈ ಸಲ ತೀವ್ರವಾಗಿ ಕೊರತೆಗೀಡಾಗಿದೆ. ಇತರ ರಾಜ್ಯಗಳಲ್ಲೂ ಇದೇ ಪರಿಸ್ಥಿತಿ. ಬೋರ್ ವೆಲ್ ನೀರು ತೆಗೆದು ಭತ್ತ ಬೆಳೆಯುವ ಸಾಧ್ಯತೆಯೂ ಇಲ್ಲ. ಹೀಗಾಗಿ ಮಾರುಕಟ್ಟೆಯಲ್ಲಿ ಸೋನಾ ಮಸೂರಿ ಅಕ್ಕಿಯ ದರ 60-70 ರೂ.ಗೆ ಏರಿದೆ. ಕಳೆದ ಒಂದು ವರ್ಷದಲ್ಲಿ ಅಕ್ಕಿಯ ದರದಲ್ಲಿ 14.50% ಏರಿಕೆಯಾಗಿದೆ.
ಅಕ್ಕಿ ದರ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ಸಬ್ಸಿಡಿ ದರದಲ್ಲಿ ಭಾರತ್ ಬ್ರಾಂಡಿನ ರೈಸ್ ಅನ್ನು ಬಿಡುಗಡೆಗೊಳಿಸಿದೆ. 5 ಕೆ.ಜಿ ಮತ್ತು 10 ಕೆಜಿ ಪ್ಯಾಕ್ಗಳಲ್ಲಿ ಇದು ಸಿಗಲಿದೆ. 10 ಕೆಜಿಯ ಪ್ಯಾಕೇಟ್ ದರ 290 ರೂ. ಆಗಿರಲಿದೆ. ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ 5 ಲಕ್ಷ ಟನ್ ಅಕ್ಕಿಯನ್ನು ಸಹಕಾರ ಕ್ಷೇತ್ರದ ಸಂಸ್ಥೆಯಾದ ನಫೆಡ್ ಮತ್ತು ಎನ್ಸಿಸಿಎಫ್ಗೆ ವಿತರಿಸಲಿದೆ. ಮೊದಲ ಹಂತದಲ್ಲಿ ಕೇಂದ್ರೀಯ ಭಂಡಾರದ ರಿಟೇಲ್ ಮಳಿಗೆಗಳಲ್ಲಿ ಸಿಗಲಿದೆ. ಇ-ಕಾಮರ್ಸ್ ಪ್ಲಾಟ್ ಫಾರ್ಮ್ಗಳಲ್ಲೂ ವಿತರಣೆಯಾಗಲಿದೆ. ಮುಂಬರುವ ದಿನಗಳಲ್ಲಿ ಭಾರತ್ ಅಕ್ಕಿ ಹೇಗೆ ಮಾರಾಟವಾಗಿದೆ ಎಂದರೆ, ಸಂಚಾರಿ ವ್ಯಾನ್ಗಳ ಮೂಲಕ ಸಾರ್ವಜನಿಕರಿಗೆ ನೇರವಾಗಿ ಮಾರಾಟವಾಗಲಿದೆ. ಸಹಕಾರಿ ವಲಯದ ಮೂರು ಕೇಂದ್ರೀಯ ಏಜೆನ್ಸಿಗಳು, ನಿರ್ದಿಷ್ಟ ರಿಟೇಲ್ ಮಳಿಗೆಗಳು ಹಾಗೂ ಇ-ಕಾಮರ್ಸ್ ತಾಣಗಳಲ್ಲಿ ಭವಿಷ್ಯದ ದಿನಗಳಲ್ಲಿ ಗ್ರಾಹಕರಿಗೆ ಸಿಗಲಿದೆ.
ಕೇಂದ್ರ ಸರ್ಕಾರ ಈಗಾಗಲೇ ಭಾರತ್ ಅಟ್ಟಾ ಎಂದು ಪ್ರತಿ ಪ್ಯಾಕೇಟ್ಗೆ 27.50 ರೂ.ಗೆ ವಿತರಿಸುತ್ತಿದೆ. ಭಾರತ್ ಚನಾ ಪ್ಯಾಕೇಟ್ ಅನ್ನು ಕೆ.ಜಿಗೆ 60 ರೂ.ಗೆ ಮಾರಾಟ ಮಾಡುತ್ತಿದೆ. ಇದಕ್ಕೆ ಉತ್ತಮ ಸ್ಪಂದನೆ ಸಿಕ್ಕಿರುವುದರಿಂದ ಅಕ್ಕಿಯನ್ನೂ ಸಬ್ಸಿಡಿ ದರದಲ್ಲಿ ನೀಡಲು ನಿರ್ಧರಿಸಲಾಗಿದೆ. ಸರ್ಕಾರವು ಅಕ್ಕಿಯ ರಫ್ತಿನ ಮೇಲೆ ನಿರ್ಬಂಧ ವಿಧಿಸಿದ ಬಳಿಕವೂ ಮಾರುಕಟ್ಟೆಯಲ್ಲಿ ಅಕ್ಕಿಯ ರಿಟೇಲ್ ದರ ತಗ್ಗಿರಲಿಲ್ಲ.
ಅಕ್ಕಿಯ ಕೊರತೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೂಡ ಬಿಪಿಎಲ್ ಕುಟುಂಬಗಳಿಗೆ ನೀಡುವ 10 ಕೆಜಿ ಅಕ್ಕಿಯಲ್ಲಿ 5 ಕೆಜಿ ಮಾತ್ರ ಕೊಡುತ್ತಿದ್ದು, ಉಳಿದ 5 ಕೆಜಿ ಅಕ್ಕಿಯ ದರವನ್ನು ಮಾತ್ರ, ಅಂದರೆ ಪ್ರತಿ ಕೆಜಿಗೆ 34 ರೂ.ಗಳಂತೆ 170 ರೂ.ಗಳನ್ನು ವಿತರಿಸುತ್ತಿದೆ.
ಇಂಟರ್ನ್ಯಾಶನಲ್ ಗ್ರೈನ್ಸ್ ಕೌನ್ಸಿಲ್ ಪ್ರಕಾರ ಜಗತ್ತಿನ ಇತರ ಭಾಗಗಳಲ್ಲಿಯೂ ಅಕ್ಕಿಯ ದರ ಏರಿಕೆಯಾಗಿದೆ. ಥಾಯ್ಲೆಂಡ್ನಲ್ಲಿ 39%, ವಿಯೆಟ್ನಾಂನಲ್ಲಿ 44% ಹೆಚ್ಚಳವಾಗಿದೆ. ಜಾಗತಿಕ ಮಟ್ಟದಲ್ಲಿ ಕಳೆದ 15 ವರ್ಷಗಳಲ್ಲಿಯೇ ಗರಿಷ್ಠ ಮಟ್ಟಕ್ಕೆ ಅಕ್ಕಿಯ ದರ ಏರಿಕೆಯಾಗಿದೆ. ವಿಶ್ವಬ್ಯಾಂಕ್ ವರದಿಯ ಪ್ರಕಾರ 2025ರ ತನಕ ಅಕ್ಕಿಯ ದರಗಳು ಇಳಿಕೆಯಾಗುವ ಸಾಧ್ಯತೆ ಇಲ್ಲ