Site icon newsroomkannada.com

‘ಇಂಡಿಯಾ’ ಇನ್ನು ಮುಂದೆ ‘ಭಾರತ’..?– ಪುನರ್ ನಾಮಕರಣಕ್ಕೆ ಕೇಂದ್ರ ನಿರ್ಧಾರ?

(Representative Image Used)

ನವದೆಹಲಿ: ನಮ್ಮ ದೇಶವನ್ನು ಇನ್ನು ಮುಂದೆ ಅಧಿಕೃತವಾಗಿ ಎಲ್ಲಾ ಕಡೆ ‘ಇಂಡಿಯಾ’ (India) ಬದಲಿಗೆ ‘ಭಾರತ’ (Bharat) ಎಂದು ಕರೆಯುವಂತಾಗಲು ಅಧಿಕೃತವಾಗಿ ದೇಶದ ಹೆಸರನ್ನು ಬದಲಾಯಿಸುವ ಯೋಚನೆ ಕೇಂದ್ರ ಸರಕಾರದ್ದಾಗಿದೆ ಎಂದು ಖಚಿತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಇದೇ ತಿಂಗಳ 18 ರಿಂದ 22ರವರೆಗೆ ನಡೆಯಲಿರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಪ್ರಧಾನಿ ಮೋದಿ (Narendra Modi) ನೇತೃತ್ವದ ಕೇಂದ್ರ ಸರಕಾರವು ದೇಶದ ಹೆಸರನ್ನು ಮರು ನಾಮಕರಣಗೊಳಿಸುವುದಕ್ಕೆ ಸಂಬಂಧಿಸಿದ ಮಸೂದೆಯೊಂದನ್ನುಮಂಡಿಸುವ ಸಾಧ್ಯತೆಗಳು ದಟ್ಟವಾಗಿದೆ ಎಂದು ತಿಳಿದುಬಂದಿದೆ.

‘ಇಂಡಿಯಾ’ ಹೆಸರನ್ನು ಅಧಿಕೃತವಾಗಿ ‘ಭಾರತ’ ಎಂದು ಬದಲಾಯಿಸುವುದಕ್ಕೆ ಸಂವಿಧಾನ ತಿದ್ದುಪಡಿ ಅಗತ್ಯವಾಗಿದ್ದು, ಇದಕ್ಕಾಗಿ ಈ ವಿಶೇಷ ಅಧಿವೇಶನದಲ್ಲಿ ಮಸೂದೆಯೊಂದನ್ನು ಕೇಂದ್ರ ಸರಕಾರ ಮಂಡಿಸುವ ಸಾಧ್ಯತೆಗಳಿವೆ.

ಇದಕ್ಕೆ ಪೂರಕವಾಗಿ, ಜಿ20 (G20 Summit) ಅತಿಥಿ ಗಣ್ಯರಿಗೆ ರಾಷ್ಟ್ರಪತಿ ಭವನದಿಂದ ಅಧಿಕೃತ ಹೇಳಿಕೆಯಲ್ಲಿ ‘ಪ್ರೆಸಿಡೆಂಟ್ ಆಫ್ ಇಂಡಿಯಾ’ ಬದಲಿಗೆ ‘ಪ್ರೆಸಿಡೆಂಟ್ ಆಫ್ ಭಾರತ್’ ಎಂದು ನಮೂದಿಸಿರುವುದು ಈ ಮೇಲಿನ ಊಹಾಪೋಹಗಳಿಗೆ ಪುಷ್ಠಿ ನೀಡಿದೆ.

ಕೆಲವು ದಿನಗಳ ಹಿಂದೆಯಷ್ಟೇ ಆರ್.ಎಸ್.ಎಸ್. (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರು, ‘ಇಂಡಿಯಾ ಬದಲಿಗೆ ನಾವು ಭಾರತ ಎಂದು ಬಳಸುವುದನ್ನು ರೂಢಿ ಮಾಡಿಕೊಳ್ಳಬೇಕಿದೆ’ ಎಂದು ಹೇಳಿದ್ದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

Exit mobile version