newsroomkannada.com

‘ಸ್ವಾತಂತ್ರ್ಯ ಸಂಭ್ರಮ’ಕ್ಕೊಂದು ಹೊಸ ಅರ್ಥ ಕೊಟ್ಟ ಬೇಂಕ್ಯ ರಿಕ್ಷಾ ಚಾಲಕ- ಮಾಲಕರು

ಸರಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ – ಅಶಕ್ತರಿಗೆ ರೂ.50 ಸಾವಿರಕ್ಕೂ ಹೆಚ್ಚಿನ ನೆರವು

ಬಂಟ್ವಾಳ: ತಮ್ಮದೇ ಆಗಿರುವ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಮತ್ತು ಬಡ ಕುಟುಂಬಗಳಿಗೆ ವಿವಿಧ ರೀತಿಯಲ್ಲಿ ಸಹಾಯ ಹಸ್ತವನ್ನು ಚಾಚುತ್ತಾ ಬಂದಿರುವ ಬೇಂಕ್ಯ ರಿಕ್ಷಾ ಚಾಲಕ-ಮಾಲಕರು ಈ ಬಾರಿಯ ಸ್ವಾತಂತ್ರ್ಯ ದಿನವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡರು.

77ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಸಜೀಪಮೂಡ ಗ್ರಾಮದ ಬೇಂಕ್ಯದಲ್ಲಿರುವ ಹಿರಿಯ ಪ್ರಾರ್ಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಪುಸ್ತಕ ಹಾಗೂ ಸಿಹಿ ತಿಂಡಿಯನ್ನು ವಿತರಿಸಲಾಯಿತು.

ಇಷ್ಟು ಮಾತ್ರವಲ್ಲದೇ, ಪ್ರತೀ ಬಾರಿಯೂ ತಮ್ಮ ಪರಿಸರದಲ್ಲಿರುವ ಬಡಕುಟುಂಬಗಳ ಸಂಕಷ್ಟಕ್ಕೆ ಸಹಾಯಹಸ್ತವನ್ನು ಚಾಚುತ್ತಿರುವ ಇಲ್ಲಿನ  ರಿಕ್ಷಾ ಚಾಲಕರು ಹಾಗೂ ಮಾಲಕರು ಈ ಬಾರಿಯೂ ಸಹ ಅಬ್ಬಾಸ್ ಮುನ್ನೂರು ಇವರ ತುರ್ತು ಚಿಕಿತ್ಸೆಗೆ 11,422 ಮತ್ತು ಗುರುಮಂದಿರ ನಿವಾಸಿ ಭಾರತಿ ಅವರ ಚಿಕಿತ್ಸೆಗೆ 11,555 ಮತ್ತು ಸಜೀಪ ಮುನ್ನೂರಿನ ಮರಿಯಮ್ಮ ಕುಟುಂಬಕ್ಕೆ 12,551 ಹಾಗೂ ಅಬ್ದುಲ್ ಅಭೀಝ್ ಕುಟುಂಬಕ್ಕೆ 14,810 ಒಟ್ಟು 50,338 ರೂಪಾಯಿಗಳನ್ನು ಒಟ್ಟು ಸೇರಿಸಿ ಬಡ ಕುಟುಂಬಕ್ಕೆ ನೀಡಿದ್ದಾರೆ.

ಸ್ವಾತಂತ್ರ್ಯೋತ್ಸವ ಸಂಭ್ರಮಕ್ಕೆ ಸಮಾಜಮುಖಿ ಕಾರ್ಯಗಳ ರೂಪ ನೀಡಿ ಜನೋಪಕಾರಿ ಕಾರ್ಯಗಳನ್ನು ನಡೆಸಿರುವ ಬೇಂಕ್ಯದ ರಿಕ್ಷಾ ಚಾಲಕ-ಮಾಲಕರ  ಮಾದರಿ ಸೇವೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

ಇಷ್ಟೆಲ್ಲಾ ಸಮಾಜಮುಖಿ ಕಾರ್ಯಗಳ ಮೂಲಕ ಪ್ರಯಾಣಿಕ ಸ್ನೇಹಿ ಜೊತೆಗ ಸಮಾಜ ಸ್ನೇಹಿ ಆಗಿರುವ ಬೇಂಕ್ಯ ರಿಕ್ಷಾಚಾಲಕ-ಮಾಲಕರ ಪ್ರಮುಖ ಬೇಡಿಕೆಯಾಗಿರುವ ಸುಸಜ್ಜಿತ ರಿಕ್ಷಾ ತಂಗುದಾಣವನ್ನು ನಿರ್ಮಿಸಿಕೊಡುವಲ್ಲಿ ಈ ಭಾಗದ ಶಾಸಕರು ಇನ್ನಾದರೂ ಮನಸ್ಸು ಮಾಡಬೇಕಾಗಿದೆ.

Exit mobile version