main logo

ಉಪ್ಪಿನಕಾಯಿ, ಬಂಗುಡೆ ಪುಳಿಮುಂಚಿಗೆ ಸಖತ್‌ ಟೇಸ್ಟ್‌ ನೀಡುವ ಹರೇಕಳಮೆಣಸು

ಉಪ್ಪಿನಕಾಯಿ, ಬಂಗುಡೆ ಪುಳಿಮುಂಚಿಗೆ ಸಖತ್‌ ಟೇಸ್ಟ್‌ ನೀಡುವ ಹರೇಕಳಮೆಣಸು

(ಹರೇಕಳ ಮೆಣಸು ಕೃಷಿಯ ವಿಡಿಯೋ ನ್ಯೂಸ್‌ ರೂಂ ಕನ್ನಡ ವೆಬ್‌ ಯೂಟ್ಯೂಬ್‌ ಚಾನೆಲ್‌ ನಲ್ಲಿ ಶೀಘ್ರ ಬರಲಿದೆ ನಿರೀಕ್ಷಿಸಿ)

ವರದಿ: ಉಮೇಶ ಎಚ್‌. ಎಸ್‌. 

ಮಂಗಳೂರು: ಕಾರ ಹೆಚ್ಚಿದ್ದರೂ ದೇಹಕ್ಕೆ ತಂಪು ನೀಡುವ ಹರೇಕಳ ಮೆಣಸು ವಿಶಿಷ್ಟ್ಯ ಆರೋಗ್ಯಕಾರಿ ಜೀವಸತ್ವಗಳನ್ನು ಹೊಂದಿರುವ ವಿಶಿಷ್ಟ, ತಳಿ.  ಹರೇಕಳ, ಪಾವೂರು, ಅಂಬ್ಲಮೊಗರಿನ ಸೀಮಿತ ಪ್ರದೇಶದಲ್ಲಿ ಬೆಳೆಯುವ ಬೆಳೆ. ಬೇಡಿಕೆ ಅಧಿಕವಾಗಿದ್ದರೂ ಇತ್ತೀಚೆಗೆ ಬೆಳೆಯುವವರ ಸಂಖ್ಯೆ ಕಡಿಮೆಯಾಗಿದೆ. ಆದರೆ ಇದೀಗ ಉಪ್ಪಿನಕಾಯಿ, ಬಂಗುಡೆ ಪುಳಿಮುಂಚಿ, ಕೋಳಿಪುಳಿಮುಂಚಿಗೆ ಬಾಯಿಚಪ್ಪರಿಸುವ ಟೇಸ್ಟ್‌ ಒದಗಿಸುವ ಹರೇಕಳ ಮೆಣಸು ಕೃಷಿಯನ್ನು ಅಂಬ್ಲಮೊಗರು ಗ್ರಾಮದ ಹಸೈನಾರ್‌, ಅಶೋಕ್‌, ಸೇರಿದಂತೆ ಹಲವಾರು ಕೈಗೊಂಡು ಅಳಿಯುತ್ತಿರುವ ಕರಾವಳಿಯ ಮಣ್ಣಿನ ಸ್ವಾದ ಹೊಂದಿರುವ ಬಹುಬೇಡಿಕೆಯ ತರಕಾರಿಯೊಂದನ್ನು ಉಳಿಸಿ ಬೆಳೆಸುವ ಕೆಲಸ ಮಾಡುತ್ತಿದ್ದಾರೆ.

ಕೃಷಿಕ ಅಶೋಕ್‌ ಅವರ ಸಾಹಸಗಾಥೆ: ಕೃಷಿಕ ಅಶೋಕ್‌ ಅವರು 15 ವರ್ಷದಿಂದ ಹಟ್ಟಿಗೊಬ್ಬರ ಬಳಸಿ ಹರೇಕಳ ಮೆಣಸು ಕೃಷಿ ಕೈಗೊಂಡಿದ್ದಾರೆ. ಯಾವುದೇ ರಾಸಾಯನಿಕ ಬಳಸದೇ ಮೆಣಸು ಕೃಷಿ ಕೈಗೊಂಡಿದ್ದು, ಈ ಬಾರಿ ಮಳೆ ಏರುಪೇರಾದ ಕಾರಣ ಮೆಣಸು ಕೃಷಿಗೆ ತೊಂದರೆಯಾಗಿದೆ ಎಂದು ಹೇಳುತ್ತಾರೆ. ಮೆಣಸು ಹೊರತುಪಡಿಸಿ ಅಶೋಕ್‌ ಅವರು ಕಪ್ಪು ಕಬ್ಬು ನಾಟಿ ಮಾಡಿದ್ದಾರೆ. ಚೌತಿ ಸಮಯದಲ್ಲಿ ಈ ತಳಿಯ ಕಬ್ಬು ಕಟಾವಿಗೆ ಬರಲಿದ್ದು, ಸ್ವಾದ, ಬಣ್ಣದಲ್ಲಿ ತನ್ನದೇ ಹೆಗ್ಗಳಿಕೆ ಹೊಂದಿದೆ. ಅದೇ ರೀತಿ ಸ್ಥಳೀಯ ಸೌತೆ ತಳಿ ನಾಟಿ ಮಾಡಿದ್ದಾರೆ.

ಗೇಣಿ ಪಡೆದ ಭೂಮಿ ಹಸನು ಮಾಡುತ್ತಿರುವ ಹಸೈನಾರ್‌: ಇದೇ ಪ್ರದೇಶದಲ್ಲಿರುವ ಹಸೈನಾರ್‌ ಅವರು ಕಳೆದ 30 ವರ್ಷಗಳಿಂದ ಗುತ್ತಿಗೆ ಪಡೆದ ಭೂಮಿಯಲ್ಲಿ ಹರೇಕಳ ಮೆಣಸು ಕೃಷಿ ಮಾಡುತ್ತಿದ್ದಾರೆ. ಉಪ್ಪಿನಕಾಯಿಗೆ ಬಳಸಲು ಹೆಸರುವಾಸಿಯಾದ ಹರೇಕಳ ಮೆಣಸಿಗೆ ತಮ್ಮ ಹಿರಿಯರ ಕಾಲದಿಂದಲೇ ಡಿಮಾಂಡ್‌ ಇತ್ತು ಎಂದು ತಮ್ಮ ಕೃಷಿ ನೆನಪನ್ನು ಬಿಚ್ಚಿಡುವ ಹಸೈನಾರ್‌ ಅವರ ಕೃಷಿ ಉತ್ಸಾಹ ಎಳೆಯರಿಗೂ ಮಾದರಿಯಾಗುವಂತಿದೆ.  2 ತಿಂಗಳೊಳಗೆ ಮೆಣಸು ಕಟಾವಿಗೆ ಬರುತ್ತದೆ. ಕೆಲವರೂ ಫೋನ್‌ ಮಾಡಿ ಮೆಣಸು ರೆಡಿ ಆಗಿದೆಯೇ ಎಂದು ಕೇಳುತ್ತಾರೆ ಎಂದು ಹರೇಕಳ ಮೆಣಸಿಗಿರುವ ಬೇಡಿಕೆ ಕುರಿತು ವಿವರಿಸುತ್ತಾರೆ. ಇದೀಗ ಮೆಣಸಿಗೆ ಎಲೆಗಳು ಮುಡಿದುಕೊಂಡು ಹೋಗುವ ಕಾಯಿಲೆ ಕಾಡುತ್ತಿದ್ದು, ಸ್ವಂತ ಭೂಮಿ ಇಲ್ಲದ ಕಾರಣ ಪರಿಹಾರ ಸೇರಿದಂತೆ ಸರ್ಕಾರದ ಯಾವುದೇ ಸೌಲಭ್ಯ ಇಲ್ಲ ಎಂದು ಹಸೈನಾರ್‌ ಬೇಸರ ವ್ಯಕ್ತಪಡಿಸುತ್ತಾರೆ.

ವಿದೇಶಕ್ಕೂ ರಫ್ತಾಗುತ್ತಿದ್ದ ಕಾಲವದು: ಉಳ್ಳಾಲವನ್ನು ಕೇಂದ್ರವನ್ನಾಗಿರಿಸಿಕೊಂಡಿದ್ದ ತುಳುವ ರಾಣಿ ಅಬ್ಬಕ್ಕ ತುಳುವ ರಾಣಿ ಅಬ್ಬಕ್ಕ ೧೬ನೇ ಶತಮಾನದ ಪೋರ್ಚುಗೀಸರೊಡನೆ ನಡೆಸಿದ ಹೋರಾಟ ವಸಾಹತುಶಾಹಿಗಳ ವಿರುದ್ಧ ಹೋರಾಟದ ಮೊದಲ ಹೆಜ್ಜೆಯೆಂದೇ ಪರಿಗಣಿತವಾಗಿದೆ. ಅದೇ ರೀತಿ ರಾಣಿ ಅಬ್ಬಕ್ಕನ ಅವಧಿಯಲ್ಲಿ ಹರೇಕಳ ಮೆಣಸು ಸೇರಿದಂತೆ ಹಲವು ಮಸಾಲೆ ಪದಾರ್ಥಗಳು  ಅವಧಿಯಲ್ಲಿ ವಿದೇಶಕ್ಕೆ ರಫ್ತಾಗುತ್ತಿತ್ತು.

ಹರೇಕಳ, ಆಂಬ್ಲಮೊಗರು, ಪಾವೂರು ಗ್ರಾಮಗಳು ಮೂಡುಬಿದಿರೆಯ ಚೌಟರಸರು ಆಡಳಿತ ಮಾಡುತ್ತಿದ್ದ ವೇಳೆ ರಾಣಿ ಅಬ್ಬ ಕ್ಕನನ್ನು ವಿವಾಹ ಮಾಡಿ ಉಳ್ಳಾಲಕ್ಕೆ ನೀಡುತ್ತಾರೆ. ಆದರೆ ವಿವಾಹ ವೇಳೆ ರಾಣಿ ಅಬ್ಬಕ್ಕನಿಗೆ ಉಳಿದೆಲ್ಲ ಗ್ರಾಮಗಳನ್ನು ನೀಡಿದರೂ ಕೂಡ ಚೌಟರಸರು  ಹರೇಕಳ, ಆಂಬ್ಲಮೊಗರು, ಪಾವೂರು ಗ್ರಾಮಗಳನ್ನು ತನ್ನ ಸ್ವಾಧೀನದಲ್ಲಿಯೇ ಇರಿಸಿಕೊಳ್ಳುತ್ತಾರೆ. ಅದಕ್ಕೆ ಕಾರಣವೂ ಇದೆ. ಈ ಪ್ರದೇಶದಲ್ಲಿ ಚೌಟರಸರಿಗೆ ಪ್ರಿಯವಾದ ಹರೇಕಳ ಮೆಣಸನ್ನು ಯಥೇಚ್ಛವಾಗಿ ಬೆಳೆಸುತ್ತಿದ್ದರು. ಅದೇ ರೀತಿ ಅರಸಿನ ಕಾಮಲೆಗೆ ರಾಮಬಾಣವಾಗಿದ್ದ ಬಿಳಿಕಬ್ಬು ಬೆಳೆಯುತ್ತಿದ್ದರು. ಅದೇ ರೀತಿ ಇಲ್ಲಿನ ಕುಂಬಳಕಾಯಿ ಬೆಳೆಯೂ ಅಷ್ಟೆ ಪ್ರಸಿದ್ಧಿ ಪಡೆದಿತ್ತು. ಕಾಲಕ್ರಮೇಣ ಹರೇಕಳ ಮೆಣಸು ಕೃಷಿ ಕುಂಠಿತವಾಯಿತು.  ಇದೀಗ ಕಿಶೋರ್‌ ಸಫಲಿಗ, ಉಸ್ಮಾನ್‌, ಶೇಖರ್‌ ಗಟ್ಟಿ, ರವಿರಾಜ್‌ ರೈ ಸೇರಿದಂತೆ ವಿರಳ ಸಂಖ್ಯೆಯ ಹಲವು ರೈತರು ಈಗ ಕೃಷಿ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಹರೇಕಳ ಮೆಣಸು ಕೃಷಿ ರಕ್ಷಣೆ, ವಿಸ್ತರಣೆಗೆ ಸರ್ಕಾರ ಮನಸ್ಸು ಮಾಡಬೇಕಿದೆ.

ಮನೋಹರ ಶೆಟ್ಟಿ ರಾಜ್ಯ ರೈತ ಸಂಘ  ರಾಜ್ಯ ಕಾರ್ಯದರ್ಶಿ(ಕೋಡಿಹಳ್ಳಿ ಚಂದ್ರಶೇಖರ್‌ ಬಣ)

ನೇರವಾಗಿ ಗ್ರಾಹಕರು ಖರೀದಿಸಲು ಅವಕಾಶ: ಇದೀಗ ಮೆಣಸು ಕಾಯಿಕಟ್ಟುವ ಹಂತದಲ್ಲಿದ್ದು, ಇನ್ನೊಂದು ಹದಿನೈದು ಇಪ್ಪತ್ತು ದಿನದಲ್ಲಿ ಗ್ರಾಹಕರು ಕೃಷಿಕರನ್ನು ನೇರವಾಗಿ ಸಂಪರ್ಕಿಸಿ ಮೆಣಸು ಪಡೆಯಲು ಅವಕಾಶವಿದೆ. 

 

Related Articles

Leave a Reply

Your email address will not be published. Required fields are marked *

error: Content is protected !!