ಮುಂಬೈ: ಐಸಿಸಿ ಏಕದಿನ ವಿಶ್ವಕಪ್ನಲ್ಲಿಂದು ಎರಡು ಪಂದ್ಯಗಳು ನಡೆಯಲಿದೆ. ಧರ್ಮಶಾಲದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಬೆಳಗ್ಗೆ 10 ಗಂಟೆಗೆ ಶುರುವಾಗಲಿರುವ ಪಂದ್ಯದಲ್ಲಿ ಶಕಿಬ್ ಅಲ್ ಹಸನ್ ನಾಯಕತ್ವದ ಬಾಂಗ್ಲಾದೇಶ ಹಾಗೂ ಹಶ್ಮತುಲ್ಲ ಶಾಹಿದಿ ಅವರ ಅಫ್ಘಾನಿಸ್ತಾನ ಮುಖಾಮುಖಿ ಆಗಲಿದೆ. ಬಳಿಕ ಮಧ್ಯಾಹ್ನ 2 ಗಂಟೆಗೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ತೆಂಬಾ ಬವುಮಾ ನೇತೃತ್ವದ ದಕ್ಷಿಣ ಆಫ್ರಿಕಾ ಹಾಗೂ ದಸುನ್ ಶನಕಾ ಅವರ ಶ್ರೀಲಂಕಾ ತಂಡಗಳು ಮುಖಾಮುಖಿ ಆಗಲಿದೆ.
ಬಾಂಗ್ಲಾದೇಶ ತಂಡಕ್ಕೆ ತಮಿಮ್ ಇಖ್ಬಾಲ್ ಅಲಭ್ಯತೆ ಎದ್ದು ಕಾಣುವುದು ಖಚಿತ. ಶಕೀಬ್ ಅಲ್ ಹಸನ್ ಮೇಲೆ ಸಾಕಷ್ಟು ಒತ್ತಡವಿದೆ. ಅನುಭವಿ ಬೌಲರ್ ಮುಸ್ತಾಫಿಜುರ್ ರಹಮಾನ್ ಏಷ್ಯಾ ಕಪ್‌ನಾದ್ಯಂತ ಬೆಂಚ್ ಕಾದಿದ್ದರಿಂದ ಇವರ ಮೇಲೂ ಒತ್ತಡವಿದೆ. ತಸ್ಕಿನ್ ಅಹ್ಮದ್ ಬೌಲಿಂಗ್ನಲ್ಲಿ ಮಾರಕವಾಗಬಹುದು. ತಂಝಿದ್ ತಮೀಮ್ ಅಭ್ಯಾಸ ಪಂದ್ಯಗಳಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದರು. ಲಿಟ್ಟನ್ ದಾಸ್ ಕೂಡ ಫಾರ್ಮ್ನಲ್ಲಿದ್ದಾರೆ.
ಇತ್ತ ಆಲ್ರೌಂಡರ್ಗಳ ಪಡೆಯನ್ನೇ ಹೊಂದಿರುವ ಅಫ್ಘಾನಿಸ್ತಾನ ಉತ್ತಮ ಫಾರ್ಮ್ನಲ್ಲಿದೆ. ಕಳೆದ ತಿಂಗಳು ಏಷ್ಯಾಕಪ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಸೋಲು ಅನುಭವಿಸಿದ ಕಾರಣ ಇದೊಂದು ಸೇಡಿನ ಪಂದ್ಯ ಕೂಡ ಹೌದು. ಅಫ್ಘಾನ್ ತಂಡವು ಈ ವರ್ಷದ ಆರಂಭದಲ್ಲಿ ಬಾಂಗ್ಲಾದೇಶದ ವಿರುದ್ಧ 2-1 ಸರಣಿ ಜಯ ಗಳಿಸಿತ್ತು.