ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕೊಂಡಾಣ ಕ್ಷೇತ್ರದ ಪಿಲಿಚಾಮುಂಡಿ ದೈವಸ್ಥಾನಕ್ಕೆ ನೂತನವಾಗಿ ನಿರ್ಮಿಸುತ್ತಿದ್ದ ನೂತನ ಭಂಡಾರಮನೆಯನ್ನು ಕಿಡಿಗೇಡಿಗಳು ಸಂಪೂರ್ಣ ಧ್ವಂಸ (Temple demolition) ಮಾಡಿದ್ದಾರೆ. ಕೊಂಡಾಣ ಕ್ಷೇತ್ರದ ಪಿಲಿಚಾಮುಂಡಿ, ಬಂಟ, ವೈದ್ಯನಾಥ ದೇವಸ್ಥಾನಕ್ಕೆ ಸೇರಿದ ಕಟ್ಟಡವನ್ನು ಜೆಸಿಬಿ ಮೂಲಕ ರಾತ್ರೋರಾತ್ರಿ ಕೆಡವಿದ್ದಾರೆ.
ಸ್ಥಳಕ್ಕೆ ತಹಸೀಲ್ದಾರ್ ಪುಟ್ಟರಾಜು, ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಆನಂದ್, ಎಸಿಪಿ ಧನ್ಯಾ ನಾಯಕ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಭಾರೀ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉಳ್ಳಾಲ ಪೊಲೀಸರು ಸೇರಿ ಎರಡು ಪೊಲೀಸ್ ತುಕಡಿ ನಿಯೋಜನೆ ಮಾಡಲಾಗಿದೆ. ಸದ್ಯ ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಆನಂದ್ ಅವರು ಈ ಸಂಬಂಧ ಉಳ್ಳಾಲ ಠಾಣೆಗೆ ದೂರು ನೀಡಿದ್ದಾರೆ. ಕೊಂಡಾಣ ದೈವಸ್ಥಾನವು ಕರ್ನಾಟಕ ರಾಜ್ಯ ಧಾರ್ಮಿಕ ದತ್ತಿ ಇಲಾಖೆಗೆ ಸೇರಿದೆ. ಕೊಂಡಾಣ ಕ್ಷೇತ್ರಕ್ಕೆ ಸಂಬಂಧಿಸಿದ ಭಂಡಾರಮನೆ ಖಾಸಗಿ ಗುತ್ತಿನ ಮನೆ ಒಡೆತನದಲ್ಲಿದೆ. ಅದರಲ್ಲಿ ಕ್ಷೇತ್ರದ ದೈವಗಳ ಹದಿನೈದು ಕೋಟಿಗೂ ಹೆಚ್ಚಿನ ಬೆಲೆಬಾಳುವ ಒಡವೆಗಳಿವೆ.