ಹಸಿರು ಬಣ್ಣದ ಗಟ್ಟಿ ಬಿದಿರಿನಲ್ಲಿ ಮುಜಂಟಿ ಕುಟುಂಬಗಳು ಚೆನ್ನಾಗಿ ಬಾಳುತ್ತವೆ. ಹಳದಿ ಬಣ್ಣದ ಬಿದಿರಿನಲ್ಲಿ ಅವುಗಳು ನೆಲೆಸುವುದು ಸ್ವಲ್ಪ ಕಡಿಮೆಯೇ ಅನ್ನಬಹುದು. ಈ ಬಿದಿರು ಹೆಚ್ಚು ಸಮಯ ಬಾಳ್ವಿಕೆ ಬರುವುದು ಇಲ್ಲ. ಬಹುಶಃ ಮುಜಂಟಿ ನೊಣಗಳು ಇದನ್ನು ಅರ್ಥೈಸಿಕೊಂಡು ಇರಬಹುದೇನೋ..!! ಆದರೆ ಈಗಿನ ಕಾಲದಲ್ಲಿ ಬಿದಿರಿನ ಬದಲು ಮರದ ಪೆಟ್ಟಿಗೆಯೇ ಹೆಚ್ಚು ಸೂಕ್ತ. ಹಲವಾರು ವಿಧದ ಮುಜಂಟಿ ಪೆಟ್ಟಿಗೆಗಳು ಈಗ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಮೊದಲೆಲ್ಲಾ ದೊಡ್ಡ ದೊಡ್ಡ ಬಿದಿರು ಹಿಂಡಿನಲ್ಲಿ ಹಲವಾರು ಮುಜಂಟಿ ಕುಟುಂಬಗಳು ದೊರೆಯುತ್ತಿತ್ತೆಂದು ಹಿರಿಯವರು ಹೇಳುತ್ತಿದ್ದರು. ಅಂದಹಾಗೆ ಈ ಮುಜಂಟಿಗಳೆಂಬ ಕಿರು ಜೇನುನೊಣಗಳು ಬಿದಿರನ್ನು ಕೊರೆದು ಕೂರುವುದಿಲ್ಲ, ಅದು, ಕಥೆಯೇ ಬೇರೆಯದೇ ಇದೆ.
ನಾವು ಸಣ್ಣದಿರುವಾಗ ಮನೆಯ ಎದುರುಗಡೆಯೇ ಒಂದು ದೊಡ್ಡ ಬಿದಿರು ಹಿಂಡು ಇತ್ತು. ಮಳೆಗಾಲದ ಆರಂಭದಲ್ಲಿ ಅದರಲ್ಲಿ ಹಲವಾರು ಕಣಿಲೆ/ಕಳಲೆ ಗಳು ಬರುತ್ತಿತ್ತು. ಈ ಕಣಿಲೆಗಳ ರಸ ಕುಡಿಲೋ ಅಥವಾ ಅದರಿಂದ ಹುಳುಗಳನ್ನು ಹೆಕ್ಕಿ ತಿನ್ನಲೋ ಮರಕುಟಿಕ ಪಕ್ಷಿಗಳು ಅಲ್ಲಲ್ಲಿ ತೂತು ಕೊರೆಯುತ್ತಿದ್ದವು. ಮುಂದೆ ಇದೇ ರಂದ್ರದ ಮೂಲಕ ಬಿದಿರು ಬೆಳವಣಿಗೆ ಆದ ನಂತರ ಮುಜಂಟಿ(ಮಿಸ್ರಿ) ಜೇನುಕುಟುಂಬಗಳು ಬಂದು ಸೇರುತ್ತಿದ್ದವು!! ಇದೇ ನೋಡಿ ಪ್ರಕೃತಿಯ ವೈಶಿಷ್ಟ್ಯ. ಪ್ರಕೃತಿಯಲ್ಲಿ ಒಂದೊಂದು ಜೀವಿಗಳು ಪರಸ್ಪರ ಎಷ್ಟೊಂದು ಹೊಂದಾಣಿಕೆ ಅಲ್ವಾ.
ಗೆದ್ದಲು ಕಟ್ಟಿದ ಹುತ್ತದಲ್ಲಿ ಕಾಲಕ್ರಮೇಣ ತುಡುವೆ ಜೇನುಕುಟುಂಬಗಳು ಸೇರಿದಂತೆ! ಆದರೆ ಮನುಷ್ಯರು ಕಟ್ಟಿದ ಮನೆಯ ಮೀಟರ್ ಬೋರ್ಡ್ ನ ಒಳಗಡೆ ಈ ಕಿರುಜೇನುನೊಣಗಳು ನೆಲೆಸಿದರೆ ಸಾಕು. ಕೂಡಲೇ ಸೀಮೆಎಣ್ಣೆ ಅಥವಾ ಯಾವುದಾದರೂ ಕೆಮಿಕಲ್ ಹಾಕಿ ತೆರವು ಗೊಳಿಸುತ್ತಾನೆ. ಎಷ್ಟಾದರೂ ಹುಳು ಮಾನವ ಅಲ್ವಾ!!
-ರಾಮಚಂದ್ರ ಪುದ್ಯೋಡು