ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ತನಿಖೆಗೆ ಸಂಬಂಧಿಸಿ ಕೆಲವರನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಪಡೆಯಲಾಗುತ್ತಿದೆ. ಆದರೆ, ಈ ಕುರಿತು ವದಂತಿಗಳನ್ನು ಹಬ್ಬಿಸಬೇಡಿ ಎಂದು ಎನ್‌ಐಎ ಅಧಿಕಾರಿಗಳು ಮಾಧ್ಯಮಕ್ಕೆ ಮನವಿ ಮಾಡಿದ್ದಾರೆ.
ಸ್ಫೋಟ ಪ್ರಕರಣದಲ್ಲಿ ಶಿವಮೊಗ್ಗ ಜಿಲ್ಲೆಯ ಮುಸಾವೀರ್ ಹುಸೇನ್ ಬಾಂಬ್ ಇಟ್ಟವನಾಗಿದ್ದರೆ, ಅಬ್ದುಲ್ ಮತೀನ್ ತಾಹ ಸಂಚು ನಡೆಸಿದ್ದ. ಕೃತ್ಯಕ್ಕೆ ಸ್ಫೋಟಕ ವಸ್ತುಗಳನ್ನು ಪೂರೈಸಲು ನೆರವು ನೀಡಿದ್ದ ಚಿಕ್ಕಮಗಳೂರು ಜಿಲ್ಲೆಯ ಕಳಸ ಮೂಲದ ಮುಜಾಮಿಲ್ ಷರೀಫ್‌ನನ್ನು ಬಂಧಿಸಲಾಗಿದೆ. ಈ ಕುರಿತಾಗಿ ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿಯೂ ತನಿಖೆ ನಡೆಸಲಾಗುತ್ತಿದೆ. ಶಂಕಿತರ ಜತೆ ಸಂಪರ್ಕ ಹೊಂದಿದ್ದವರಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ. ತಲೆಮರೆಸಿಕೊಂಡಿರುವ ಶಂಕಿತರ ಸ್ನೇಹಿತರು, ಕಾಲೇಜು ಸಹಪಾಠಿಗಳನ್ನು ವಿಚಾರಣೆ ನಡೆಸುತ್ತಿದ್ದೇವೆ. ಇದೊಂದು ಭಯೋತ್ಪಾದಕ ಕೃತ್ಯವಾಗಿರುವ ಕಾರಣ ಖಚಿತ ಮಾಹಿತಿ ಇಲ್ಲದೆ ಸುದ್ದಿಗಳನ್ನು ಹರಡದಂತೆ ಎನ್‌ಐಎ ಅಧಿಕಾರಿಗಳು ಮನವಿ ಮಾಡಿದ್ದಾರೆ.
ತೀರ್ಥಹಳ್ಳಿ ತಾಲೂಕಿನ ಬಿಜೆಪಿ ಕಾರ್ಯಕರ್ತ ಸಾಯಿ ಪ್ರಸಾದ್‌ನನ್ನು ಎನ್‌ಐಎ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಈ ಕುರಿತು ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದ್ದಂತೆ ಎನ್ಐಎ ಪ್ರಕಟಣೆ ನೀಡಿದ್ದು ನಾವು ತನಿಖೆಗೆ ಸಂಬಂಧಪಟ್ಟು ಹಲವಾರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತೇವೆ. ಹಾಗಂತ, ಅವರೆಲ್ಲ ಆರೋಪಿಗಳು ಅಂತಲ್ಲ. ಪ್ರಮುಖ ಆರೋಪಿಗಳಿಗೆ ಸಂಪರ್ಕ ಇರುವ ಕಾರಣಕ್ಕೆ ವಿಚಾರಣೆ ನಡೆಸುತ್ತಿದ್ದೇವೆ ಎಂದು ತಿಳಿಸಿದೆ. ತೀರ್ಥಹಳ್ಳಿಯಲ್ಲಿ ಪೇಂಟರ್ ವೃತ್ತಿ ನಡೆಸುತ್ತಿರುವ ಸಾಯಿ ಪ್ರಸಾದ್, ಶಂಕಿತನ ಅಂಗಡಿಯಲ್ಲಿ ಮೊಬೈಲ್ ಖರೀದಿಸಿದ್ದ. ಅಲ್ಲದೆ ಆತನ ಮನೆಗೆ ಪೇಂಟ್ ಮಾಡಿಕೊಟ್ಟಿದ್ದ ಎನ್ನಲಾಗಿದೆ. ಈ ನಡುವೆ ಹಲವು ಬಾರಿ ಕರೆ ಮಾಡಿ ಮಾತನಾಡಿದ್ದ ಎಂಬ ಮಾಹಿತಿ ಆಧರಿಸಿ ಆರೋಪಿಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದಕ್ಕಾಗಿ ವಿಚಾರಣೆ ನಡೆಸಿದ್ದಾರೆ.