ಹೆಬ್ರಿ: ನಾಲ್ಕೂರು ಗ್ರಾಮದ ಕಟ್ಟೆ ದೊಡ್ಡ ಮನೆ ಎಂಬಲ್ಲಿ ಅಜ್ಜಿಯ ಜತೆ ನಡೆದುಕೊಂಡು ಹೋಗುತ್ತಿದ್ದ ಮೊಮ್ಮಗಳು ಕೃತಿಕಾ (3) ಎಂಬ ಬಾಲಕಿ ರಸ್ತೆ ಪಕ್ಕದಲ್ಲಿರುವ ಹೊಂಡಕ್ಕೆ ಬಿದ್ದು ಉಸಿರು ಕಟ್ಟಿ ಮೃತಪಟ್ಟ ಘಟನೆ ನಡೆದಿದೆ. ಮಗುವನ್ನು ರಕ್ಷಿಸಲು ಪಕ್ಕಕ್ಕೆ ಹಾರಿದ ಅಜ್ಜಿ ಕೂಡ ಅಪಾಯಕ್ಕೆ ಸಿಲುಕಿದ್ದು ಅವರನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಅಜ್ಜಿ ಮತ್ತು ಇಬ್ಬರು ಮೊಮ್ಮಕ್ಕಳು ಮಂಗಳವಾರ ಮಧ್ಯಾಹ್ನ ಒಂದು ಗಂಟೆಯ ವೇಳೆ ಕೃಷಿ ಚಟುವಟಿಕೆ ನಡೆಯುತ್ತಿದ್ದ ಗದ್ದೆಗೆ ಭೇಟಿ ನೀಡಿ ವಾಪಸ್ ಘಟನೆ ಸಂಭವಿಸಿದೆ. ಅಜ್ಜಿಯ ಜತೆ ಇದ್ದ ಇಬ್ಬರು ಮೊಮ್ಮಕ್ಕಳಲ್ಲಿ 5 ವರ್ಷದ ಹಿರಿಯ ಮೊಮ್ಮಗ ಮನೆ ಹತ್ತಿರ ಬರುತ್ತಿದ್ದಂತೆ ಹಳ್ಳದ ದಡದ ದಾರಿಯಲ್ಲಿ ಓಡಲಾರಂಭಿಸಿದ. ಅದನ್ನು ನೋಡಿದ ಆತನ ತಂಗಿ ಕೃತಿಕಾ ಕೂಡ ಅಜ್ಜಿಯ ಕೈ ಬಿಡಿಸಿ ಓಡಲಾರಂಭಿಸಿದಳು. ಅಜ್ಜಿನಿಲ್ಲುವಂತೆ ಸೂಚಿಸಿದರೂ ಕೇಳದ ಓಡಿದ ಕೆಲವೇ ಸಮಯದಲ್ಲಿ ಆಕೆ ಕಾಲು ಜಾರಿ ನೀರಿಗೆ ಬಿದ್ದಳು. ಮಗುವಿನ ರಕ್ಷಣೆಗಾಗಿ ಅಜ್ಜಿ ಕೂಡ ಕೂಡಲೇ ಹಳ್ಳಕ್ಕೆ ಹಾರಿದರು. ಮೊಮ್ಮಗಳನ್ನು ಹಿಡಿದು ಮೇಲೆ ಬರುವ ಯತ್ನ ಮಾಡುವಷ್ಟರಲ್ಲಿ ಮಗು ಕೈ ಜಾರಿತು. ಆಳ ಇದ್ದುದರಿಂದ ಅಜ್ಜ ಕೂಡ ಈಜಲು ಸಾಧ್ಯವಾಗದೆ ಮುಳುಗಲಾರಂಭಿಸಿದರು. ಅಷ್ಟರಲ್ಲಿ ವಾಪಸ್ ಬಂದಿದ್ದ ಮೊಮ್ಮಗ ಬೊಬ್ಬೆ ಹಾಕಿ ಸ್ಥಳೀಯರನ್ನು ಕರೆದ. ಅವರು ಬಂದು ಅಜ್ಜಿಯನ್ನು ರಕ್ಷಿಸಿದರೂ ಮಗುವನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಘಟನೆಯ ವೇಳೆ ಮಕ್ಕಳ ಅಪ್ಪ-ಅಮ್ಮ ಮನೆಯಲ್ಲಿರಲಿಲ್ಲ. ತಾಯಿ ಬೀಜದ ಕಂಪೆನಿಯ ಕೆಲಸಕ್ಕೆ ಮತ್ತು ಅಪ್ಪ ಕೂಲಿ ಕೆಲಸಕ್ಕೆ ತೆರಳಿದ್ದರು. ಹಳ್ಳ ಸುಮಾರು 10 ಅಡಿ ಅಳವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.