ಕೊಚ್ಚಿ: ಕೇರಳದ ತ್ರಿಶೂರ್ ಬಳಿಯ ಪ್ರಸಿದ್ಧ ಗುರುವಾಯೂರ್ ದೇವಾಲಯದ 41 ಆನೆಗಳಿಗೆ ಶನಿವಾರದಿಂದ ಒಂದು ತಿಂಗಳ ಕಾಲ ಆಯುರ್ವೇದ, ಅಲೋಪತಿ ಚಿಕಿತ್ಸೆ ನಡೆಯಲಿದೆ.
ಪಶುಸಂಗೋಪನಾ ಖಾತೆ ರಾಜ್ಯ ಸಚಿವೆ ಜೆ.ಚಿಂಚುರಾಣಿ ಅವರು ಜೂನಿಯರ್ ವಿಷ್ಣು ಮತ್ತು ವಿನಾಯಕನ್ ಎಂಬ ಎರಡು ಆನೆಗಳಿಗೆ ಆಯುರ್ವೇದ ಮತ್ತು ಅಲೋಪತಿ ಔಷಧಗಳನ್ನು ಬೆರೆಸಿದ ಬೃಹತ್ ಅಕ್ಕಿಯ ಉಂಡೆಯನ್ನು ಉಣಿಸುವ ಮೂಲಕ ಪ್ರಕ್ರಿಯೆಗೆ ಚಾಲನೆ ನೀಡಿದರು. ದೇವಾಲಯದ ಆನೆಗಳಿಗೆ ಚಿಕಿತ್ಸೆ ನೀಡಲು ಪ್ರತ್ಯೇಕ ತಂಡವಿದೆ. ಆದರೆ ಈ ವಿಶೇಷ ಶಿಬಿರದಲ್ಲಿ ಆನೆಗಳನ್ನು ಪುನರ್ ಯೌವ್ವನಗೊಳಿಸಲು ವಿಶೇಷ ತಜ್ಞರನ್ನು ನೇಮಿಸಲಾಗುತ್ತದೆ.
ವಿಶೇಷ ತಜ್ಞರು ಅವುಗಳನ್ನು ಮೇಲ್ವಿಚಾರಣೆ ಮಾಡುತ್ತಾರೆ. ದೇವಾಲಯದ ಆವರಣದಲ್ಲಿಯೇ 23 ಆನೆಗಳಿಗೆ ಚಿಕಿತ್ಸೆ ನೀಡಲಾಗುವುದು, ಉಳಿದಿರುವ 18 ಆನೆಗಳಿಗೆ ಪ್ರಸ್ತುತ ಇರುವ ಸ್ಥಳದಲ್ಲಿಯೇ ಚಿಕಿತ್ಸೆ ನೀಡಲಾಗುವುದು ಎಂದು ದೇವಾಲಯದ ಆನೆಗಳ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿರುವ ಸುಭಾಷ್ ತಿಳಿಸಿದ್ದಾರೆ. ಅಲೋಪಥಿಕ್ ಮತ್ತು ಆಯುರ್ವೇದ ಔಷಧಿಗಳೊಂದಿಗೆ ಸಿದ್ಧಪಡಿಸಿದ ಆಹಾರದ ಚಾರ್ಟ್‌ನ ಪ್ರಕಾರ ಆನೆಗಳಿಗೆ ಆಹಾರವನ್ನು ನೀಡುವುದು ನವ ಯೌವನ ಪಡೆಯುವ ಚಿಕಿತ್ಸೆಯ ಒಂದು ಭಾಗವಾಗಿದೆ. ಅಲ್ಲದೆ ಆನೆಗಳ ರಕ್ತ ಪರಿಚಲನೆ, ಹೊಟ್ಟೆಯ ಪರೀಕ್ಷೆಯನ್ನು ನಡೆಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.