Site icon newsroomkannada.com

ಮಂದಸ್ಮಿತ ಬಾಲ ರಾಮನ ವಿಗ್ರಹದ ಫೊಟೋವೇ ನಕಲಿಯಂತೆ

ಅಯೋಧ್ಯೆ: ರಾಮ ಜನ್ಮಭೂಮಿಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರದ ಗರ್ಭಗುಡಿಯಲ್ಲಿ ಇರಿಸಲಾಗಿರುವ ಮಂದಸ್ಮಿತ ರಾಮಲಲ್ಲಾನ ಫೋಟೊ ವೈರಲ್‌ ಆಗಿದೆ. ಮುಗುಳು ನಗೆ ಬೀರುತ್ತಿರುವ ಬಾಲರಾಮನ ಫೋಟೊ ನೋಡಿ ಜನ ಪುಳಕಿತರಾಗಿದ್ದಾರೆ. ಇದರ ಬೆನ್ನಲ್ಲೇ ಅಯೋಧ್ಯೆ ರಾಮಮಂದಿರದ ಪ್ರಧಾನ ಅರ್ಚಕರಾಗಿರುವ ಆಚಾರ್ಯ ಸತ್ಯೇಂದ್ರ ದಾಸ್‌ ಅವರು ಮಹತ್ವದ ಸ್ಪಷ್ಟನೆ ನೀಡಿದ್ದಾರೆ. ‘ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿರುವ ಫೋಟೊ ಅಸಲಿ ಅಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ‘ಪ್ರಾಣ ಪ್ರತಿಷ್ಠಾಪನೆ ಮುಗಿಯುವವರೆಗೆ ರಾಮಲಲ್ಲಾನ ಮುಖವನ್ನು ಅನಾವರಣಗೊಳಿಸುವುದಿಲ್ಲ. ರಾಮಲಲ್ಲಾನ ಕಣ್ಣಿಗೆ ಬಟ್ಟೆ ಕಟ್ಟಲಾಗಿದ್ದು, ಪ್ರಾಣಪ್ರತಿಷ್ಠಾಪನೆ ಮುಗಿಯುವವರೆಗೆ ಬಟ್ಟೆ ಬಿಚ್ಚುವುದಿಲ್ಲ. ಹಾಗಾಗಿ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮಂದಸ್ಮಿತ ರಾಮಲಲ್ಲಾನ ಫೋಟೊ ಅಸಲಿ ಅಲ್ಲ. ವೈರಲ್‌ ಆಗುತ್ತಿರುವ ಫೋಟೊದ ಕುರಿತು ತನಿಖೆಯಿಂದಲೇ ಸ್ಪಷ್ಟ ಮಾಹಿತಿ ಲಭ್ಯವಾಗಬೇಕಿದೆ’ ಎಂದು ANI ಸುದ್ದಿಸಂಸ್ಥೆ ಜತೆ ಮಾತನಾಡುವ ವೇಳೆ ಆಚಾರ್ಯ ಸತ್ಯೇಂದ್ರ ದಾಸ್‌ ಅವರು ಸ್ಪಷ್ಟಪಡಿಸಿದ್ದಾರೆ.

Exit mobile version