ಅಯೋಧ್ಯೆ,: ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮ ಮಂದಿರ ನಿರ್ಮಾಣವಾಗುತ್ತಿರುವುದು ನಮಗೆಲ್ಲ ತಿಳಿದ ವಿಷಯವೇ ಆಗಿದೆ. ಅದೇರೀತಿ ಪ್ರಭು ಶ್ರೀರಾಮಚಂದ್ರ ದೇವರ ಜನ್ಮಭೂಮಿ ಅಯೋಧ್ಯೆ ಪಟ್ಟಣದ ಮರುನಿರ್ಮಾಣ ಕಾರ್ಯ ಭರದಿಂದ ಸಾಗಿದೆ.
ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಜಿಲ್ಲಾಡಳಿತವು ಹಳೆಯ ಅಯೋಧ್ಯೆಯನ್ನು ನವೀಕರಿಸುವಲ್ಲಿ ನಿರತವಾಗಿದ್ದು, ಅಯೋಧ್ಯೆಯಲ್ಲಿ ಘನತ್ಯಾಜ್ಯ ನಿರ್ವಹಣೆ, ದ್ರವ ತ್ಯಾಜ್ಯ ನಿರ್ವಹಣೆ ಮತ್ತು ಮಲ್ಟಿ-ಲೆವೆಲ್ ಪಾರ್ಕಿಂಗ್‌ಗೆ ಸಹ ಕೆಲಸ ನಡೆಯುತ್ತಿದೆ.
ಸರಯೂ ನದಿಗೆ ದ್ರವ ತ್ಯಾಜ್ಯವನ್ನು ಸುರಿಯುವುದನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಅದರ ವಿಲೇವಾರಿಗಾಗಿ ಮುನ್ಸಿಪಲ್ ಕಾರ್ಪೊರೇಷನ್ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ, ಇದರಲ್ಲಿ ಅನೇಕ ಒಳಚರಂಡಿ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗುತ್ತಿದೆ. ಇದರೊಂದಿಗೆ ಘನತ್ಯಾಜ್ಯ ಘಟಕದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ದ್ರವ ತ್ಯಾಜ್ಯ ಸಂಸ್ಕರಣಾ ಘಟಕವನ್ನು ಸಹ ನಿರ್ಮಿಸಲಾಗುತ್ತಿದೆ.
ಘಟಕ “ದಿನಕ್ಕೆ 12 ಮಿಲಿಯನ್ ಲೀಟರ್ ತ್ಯಾಜ್ಯ ನಿರ್ವಹಣೆ ಸಾಮರ್ಥ್ಯದ ಘಟಕ ಕಾರ್ಯನಿರ್ವಹಿಸುತ್ತಿದೆ. 6 ಎಂಎಲ್‌ಡಿಯ ಒಂದು ಎಸ್‌ಟಿಪಿ ಪೂರ್ಣಗೊಂಡಿದೆ. ಅದೇ ಸಮಯದಲ್ಲಿ,33 ಎಂಎಲ್‌ಡಿಯ ಮತ್ತೊಂದು ಎಸ್‌ಟಿಪಿ ನಿರ್ಮಾಣ ಹಂತದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇವೇಳೆ ಕೌಶಲ್ಯ ಸದನವನ್ನು ನಿರ್ಮಿಸಲಾಗುತ್ತಿದ್ದು, ಇದರಲ್ಲಿ ನಿರ್ಗತಿಕ ಮಹಿಳೆಯರು ಮತ್ತು ಮಕ್ಕಳಿಗೆ ಸ್ಥಳಾವಕಾಶ ಒದಗಿಸಲಾಗುತ್ತಿದೆ. 35 ಕೋಟಿ ರೂ.ವೆಚ್ಚದಲ್ಲಿ ಮಲ್ಟಿ ಲೆವೆಲ್ ಪಾರ್ಕಿಂಗ್ ನಿರ್ಮಿಸಲಾಗುತ್ತಿದೆ. ಇದರಿಂದ ಕಚೇರಿಗಳ ಮುಂದೆ ನಿಲ್ಲಿಸಲಾಗುತ್ತಿರುವ ವಾಹನಗಳನ್ನು ಸ್ಥಳಾಂತರಿಸಲು ಅನುಕೂಲವಾಗಲಿದ್ದು, ಟ್ರಾಫಿಕ್ ಜಾಮ್ ಆಗುವುದಿಲ್ಲ ಎಂದು ಅಧಿಕಾರಿಗಳು ವಿವರಿಸಿದ್ದಾರೆ.