ಅಯೋಧ್ಯೆ (ಉತ್ತರ ಪ್ರದೇಶ): ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆಗೆ ದಿನಗಣನೆ ಶುರುವಾಗಿದ್ದು, ಮಂದಿರ ನಿರ್ಮಾಣ ಕೆಲಸ ಭರದಿಂದ ಸಾಗಿದೆ. ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ಮೊದಲ ಚಿನ್ನ ಲೇಪಿತ ಬಾಗಿಲನ್ನು ಅಳವಡಿಸಲಾಗಿದ್ದು, ಮುಂದಿನ ಮೂರು ದಿನಗಳಲ್ಲಿ ಇನ್ನೂ 13 ಬಾಗಿಲುಗಳನ್ನು ಅಳವಡಿಸಲಾಗುವುದು.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೂ ಮುನ್ನ ದೇವಾಲಯದ ಚಿನ್ನದ ಲೇಪಿತ ಬಾಗಿಲುಗಳ ಮೊದಲ ಚಿತ್ರ ಮಂಗಳವಾರ ಹೊರಬಿದ್ದಿದೆ. ದೇವಾಲಯದ ಗರ್ಭಗುಡಿ ಅಥವಾ ‘ಗರ್ಬಗೃಹ’ದಲ್ಲಿ ಚಿನ್ನದ ಲೇಪಿತ ಬಾಗಿಲುಗಳನ್ನು ಸ್ಥಾಪಿಸಲಾಗಿದೆ. ಅಲ್ಲಿ ದೇವರ ವಿಗ್ರಹವನ್ನು ಜನವರಿ 22 ರಂದು ಪ್ರತಿಷ್ಠಾಪಿಸಲಾಗುವುದು. ಹೈದರಾಬಾದ್ ಮೂಲದ ಕುಶಲಕರ್ಮಿಯೊಬ್ಬರು ಬಾಗಿಲನ್ನು ರೂಪಿಸಿದ್ದಾರೆ.
ಲಕ್ಷಾಂತರ ಜನರ ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವದ ಕೇಂದ್ರ ಬಿಂದುವಾದ ‘ಪ್ರಾಣ ಪ್ರತಿಷ್ಠಾ’ ಸಮಾರಂಭವು ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಇತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.