ಇದೇ ಜನೇವರಿ 22ಕ್ಕೆ ಅಯೋಧ್ಯೆಯ ಶ್ರೀರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ವಿಜಯಪುರದ ಯುವಕರು ವಿಶಿಷ್ಟವಾಗಿ ಶ್ರೀರಾಮನಿಗೆ ಭಕ್ತಿ ಸಮರ್ಪಿಸಿದ್ದಾರೆ. ನಮೋ ಸ್ಕೈಡೈವಿಂಗ್ ಎಂಬ ನಾಲ್ವರ ತಂಡ, ಬ್ಯಾಂಕಾಕ್ನ ಖೋಯಾಯ್ ಎಂಬ ಪ್ರದೇಶಕ್ಕೆ ತೆರಳಿದೆ. ಅಲ್ಲಿ, 13 ಸಾವಿರ ಅಡಿ ಎತ್ತರದಿಂದ ಜೈ ಶ್ರೀರಾಮ ಎಂದು ಬರೆದಿರುವ ಹಾಗೂ ರಾಮ ಮಂದಿರದ ಫೋಟೊ ಇರುವ ಜೊತೆಗೆ ಪ್ರಧಾನಿ ಮೋದಿ ಅವರ ಭಾವಚಿತ್ರವಿರುವ ಬ್ಯಾನರ್ ಹಿಡಿದು ಸ್ಕೈಡೈವಿಂಗ್ ಮಾಡಿದ್ದಾರೆ. ವಿಜಯಪುರದ ಉದ್ಯಮಿ ರಾಜಶೇಖರ ಮುತ್ತಿನಪೆಂಡಿಮಠ ನೇತೃತ್ವದಲ್ಲಿ, ಬೆಂಗಳೂರಿನ ರಾಹುಲ್ ಡಾಕ್ರೆ, ಅನುಭವ ಅಗರವಾಲ್ ಹಾಗೂ ಮಹಾರಾಷ್ಟ್ರದ ಹಿಮಾನಶೂ ಸಾಬಳೆ ಸ್ಕೈಡೈವಿಂಗ್ ಮಾಡಿದ್ದಾರೆ. ಶ್ರೀರಾಮ ದೇಶಕ್ಕೆ ಮಾತ್ರವಲ್ಲ ಇಡಿ ಜಗತ್ತಿಗೆ ಮಾದರಿಯಾಗಿದ್ದಾನೆ. ರಾಮನಿಗೆ ಯಾವುದೇ ಸ್ಥಳದ, ವ್ಯಾಪ್ತಿಯ ಮಿತಿಯಿಲ್ಲ. ಹಾಗಾಗಿ ಆಗಸದಲ್ಲೂ ಶ್ರೀರಾಮನ ಹೆಸರು ಹಾರಬೇಕು ಎಂದು ಯುವಕರು ಹೇಳಿದ್ದಾರೆ.