main logo

ಅಯೋಧ್ಯೆ ಶ್ರೀರಾಮ ಮಂದಿರ ಬ್ರಹ್ಮಕಲಶಾಭಿಷೇಕಕ್ಕೆ ಕನ್ನಡಿಗರ ಪೌರೋಹಿತ್ಯ

ಅಯೋಧ್ಯೆ ಶ್ರೀರಾಮ ಮಂದಿರ ಬ್ರಹ್ಮಕಲಶಾಭಿಷೇಕಕ್ಕೆ ಕನ್ನಡಿಗರ ಪೌರೋಹಿತ್ಯ

ಮಂಗಳೂರು: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ (Ayodhya) ನಿರ್ಮಾಣವಾಗುತ್ತಿರುವ ಭವ್ಯ ಶ್ರೀರಾಮ ಮಂದಿರವನ್ನು (Sri Rama Mandir) 2024ರ ಜನವರಿ 22ರಂದು ಉದ್ಘಾಟನೆಗೊಳ್ಳಲಿದೆ.

ಈ ಭವ್ಯ ಮಂದಿರದ   ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಕರ್ನಾಟಕ ಕರಾವಳಿಯ ಕನ್ನಡಿಗರೊಬ್ಬರ ಉಸ್ತುವಾರಿಯಲ್ಲಿ ನಡೆಯಲಿದೆ. ಬ್ರಹ್ಮಕಲಶೋತ್ಸವದ ಪ್ರಧಾನ ಅಧ್ವರ್ಯ ಸ್ಥಾನ ಕೂಡ ಕನ್ನಡಿಗರೇ ಆದ ಉಡುಪಿ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ (Vishwa Prasanna Teertha Swamiji) ಅವರಿಗೆ ಒದಗಿ ಬಂದಿದೆ.

ಕರ್ನಾಟಕ-ಕೇರಳ ಗಡಿಭಾಗ ತಲಪಾಡಿಯ ರಾಜಪುರೋಹಿತ ಬಿರುದಾಂಕಿತ ವಿದ್ವಾನ್‌ ವಿಷ್ಣುಮೂರ್ತಿ ಆಚಾರ್ಯ ಅವರ ಉಸ್ತುವಾರಿಯಲ್ಲಿ ಬ್ರಹ್ಮಕಲಶಾಭಿಷೇಕ ಧಾರ್ಮಿಕ ವಿಧಿವಿಧಾನಗಳು ನೆರವೇರಲಿದೆ. ಈ ಕುರಿತು ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಸದಸ್ಯರೂ ಆಗಿರುವ ಉಡುಪಿ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ವಿದ್ವಾನ್‌ ವಿಷ್ಣುಮೂರ್ತಿ ಆಚಾರ್ಯ ಅವರಿಗೆ ಆಹ್ವಾನ ನೀಡಿದ್ದಾರೆ.

ಅಯೋಧ್ಯೆ ಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆಯನ್ನು ಪ್ರಧಾನ ಅಧ್ವರ್ಯ ಸ್ಥಾನದಿಂದ ಸ್ವತಃ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನೆರವೇರಿಸಲಿದ್ದು, ಪ್ರಧಾನಿ ಸಹಿತ ದೇಶಾದ್ಯಂತದ ಸಾಧು, ಸಂತರು, ಗಣ್ಯರು ಇದಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿದ್ವಾನ್‌ ವಿಷ್ಣುಮೂರ್ತಿ ಆಚಾರ್ಯ ಅವರು ತಲಪಾಡಿ ನಿವಾಸಿಯಾದರೂ ಪ್ರಸಕ್ತ ವಾಸ ಚೆನ್ನೈನಲ್ಲಿ. ಇವರು ಪೇಜಾವರ ಮಠದ ಹಿರಿಯಶ್ರೀಗಳಾಗಿದ್ದ ಶ್ರೀವಿಶ್ವೇಶತೀರ್ಥರ ಅಚ್ಚುಮೆಚ್ಚಿನ ಶಿಷ್ಯರಾಗಿದ್ದರು. ಬೆಂಗಳೂರಿನ ಶ್ರೀಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ 11 ವರ್ಷಗಳ ಕಾಲ ವಿದ್ಯಾರ್ಜನೆ ನಡೆಸಿದ ವಿಷ್ಣುಮೂರ್ತಿ ಆಚಾರ್ಯರು ಬಳಿಕ ಎರಡು ವರ್ಷಕಾಲ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಜತೆಗಿದ್ದು, ಸುಧಾ ಮಂಗಲ ಅಧ್ಯಯನ ನಡೆಸಿದ್ದರು.

1992ರಲ್ಲಿ ಅಯೋಧ್ಯೆಯಲ್ಲಿ ಕರಸೇವೆ ಸಂದರ್ಭ ಗುಂಬಜ್‌ ಉರುಳಿಸಿದಾಗ ವಿಷ್ಣುಮೂರ್ತಿ ಆಚಾರ್ಯರು ಕೂಡ ಶ್ರೀವಿಶ್ವೇಶತೀರ್ಥರ ಜತೆಗೆ ಇದ್ದರು. ಅಲ್ಲಿ ರಾಮನ ಜನ್ಮಸ್ಥಾನದಲ್ಲಿ ಶ್ರೀರಾಮಲಲ್ಲಾನ ಮೂರ್ತಿಯನ್ನು ತಾತ್ಕಾಲಿಕವಾಗಿ ಪ್ರತಿಷ್ಠಾಪಿಸುವಲ್ಲಿ ಶ್ರೀವಿಶ್ವೇಶತೀರ್ಥರಿಗೆ ಸಾಥ್‌ ನೀಡಿದ್ದು ಕೂಡ ಇದೇ ವಿಷ್ಣುಮೂರ್ತಿ ಆಚಾರ್ಯರು. ಬಳಿಕ ಚೆನ್ನೈಗೆ ತೆರಳಿ, ಅಲ್ಲಿ ಉಡುಪಿ ಪೇಜಾವರ ಶಾಖಾ ಮಠದಲ್ಲಿ ಪೌರೋಹಿತ್ಯ ನಡೆಸುತ್ತಿದ್ದರು.

Related Articles

error: Content is protected !!